ಹಾಸನ: 9 ರೂಪಾಯಿ 34 ಪೈಸೆ ಸಾಲ ಕಟ್ಟುವಂತೆ ಕೆನರಾ ಬ್ಯಾಂಕ್‌ನಿಂದ ಕರೆ ಮಾಡಿದ ಹಿನ್ನೆಲೆಯಲ್ಲಿ ಹತ್ತು ರೂಪಾಯಿ ಲೋನ್ ಕಟ್ಟಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು ಹಿಡಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಎಂಬವರು ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌ನಿಂದ 50 ಸಾವಿರ ಲೋನ್ ಪಡೆದು ಸಂಪೂರ್ಣ ಹಣ ಬಡ್ಡಿ ಸಮೇತ ಕಟ್ಟಿದ್ದರು. ನಿನ್ನೆ ಏಕಾಏಕಿ ಕರೆ ಮಾಡಿ 9 ರೂಪಾಯಿ 34 ಪೈಸೆ ಸಾಲ ಕ್ಲಿಯರ್ ಮಾಡಲು ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದರು. ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ಬಂದು 10 ರೂಪಾಯಿ ಹಣ ಕೊಟ್ಟು ಸಾಲ ಕ್ಲಿಯರ್ ಮಾಡಿದ ಬೆಳೆಗಾರ ರೆಸಿಪ್ಟ್‌ನಲ್ಲಿ 9 ರೂಪಾಯಿ 34 ಪೈಸೆ ಉಲ್ಲೇಖಿಸಿದ್ದೀರಿ, ಉಳಿದ 66 ಪೈಸೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಹೊರೆಯಾದ್ರೂ ನಿಲ್ಲಿಸಲ್ಲ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯೂ ಇಲ್ಲ: ಡಿಕೆಶಿ
ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಚೊಕ್ಕಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಪೈಸೆ ಲೆಕ್ಕದಲ್ಲಿ ಸಾಲ ವಾಪಸ್ ಕೇಳಿದ್ದಾರೆ. ಅವರು ಹೇಳಿದ ಬಾಕಿ ಸಾಲ ಕಟ್ಟಿದ್ದೀನಿ, ಹಾಗಿದ್ದ ಮೇಲೆ ನನ್ನ ಬಾಕಿ 66 ಪೈಸೆ ವಾಪಸ್ ಕೊಡಲಿ ಎಂದು ಆಗ್ರಹಿಸಿದರು.
ಬ್ಯಾಂಕ್ ಸಿಬ್ಬಂದಿ ಪ್ರಶ್ನಿಸಿದರೆ, ‘ಸಾಲ ವಾಪಸ್ ಕೇಳಿ ನಾವು ಕರೆ ಮಾಡಿಲ್ಲ. ಇದು ಕಂಪ್ಯೂಟರೈಸ್ಡ್ ಟೆಲಿಕಾಲ್‌ನಿಂದ ಆಗಿದೆ’ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ ಎಂದು ಬ್ಯಾಂಕ್ ನಡೆಗೆ ಬೆಳೆಗಾರ ಚೊಕ್ಕಣ್ಣಗೌಡ ಕಿಡಿಕಾರಿದ್ದು, ವಿಚಿತ್ರ ಸನ್ನಿವೇಶಕ್ಕೆ ಸಕಲೇಶಪುರ ಕೆನರಾ ಬ್ಯಾಂಕ್ ಶಾಖೆ ಸಾಕ್ಷಿಯಾಯಿತು. ಇದನ್ನೂ ಓದಿ: ಬಾಗಲಕೋಟೆ ಕಲ್ಲು ತೂರಾಟ| ಮಸೀದಿ ಸದಸ್ಯರನ್ನು ಬಂಧಿಸಿ – ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್

