ವಿಜಯಪುರ: ಬಸವಣ್ಣನವರ ಕಾಯಕ ತತ್ವದಂತೆ ಬಂಜಾರ ಸಮಾಜವು ಶ್ರಮ ಜೀವಿಗಳು, ಇವರು ಭವ್ಯವಾದ ಇತಿಹಾಸ ಹೊಂದಿದ್ದು, ಕಲೆ-ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ್ (MB Patil) ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಶ್ರೀ ಸೇವಾಲಾಲ್ ಅವರು ಸಮಾನತೆ, ಸೌಹಾರ್ದತೆ ಮತ್ತು ಶಿಸ್ತಿನ ಜೀವನದ ಮಹತ್ವವನ್ನು ಬೋಧಿಸಿದ ಮಹಾನ ವ್ಯಕ್ತಿ. ಪ್ರತೀ ತಾಂಡದಲ್ಲೂ ದುರ್ಗಾದೇವಿ ಹಾಗೂ ಸೇವಾಲಾಲ ದೇವಸ್ಥಾನಗಳನ್ನು ನಿರ್ಮಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಬಂಜಾರ ಸಮುದಾಯದ ಆಧ್ಯಾತ್ಮಿಕ ಬಲದ ಸಂಕೇತವಾಗಿದೆ. ಇವರ ಸಾಂಪ್ರದಾಯಿಕ ಕಸೂತಿ ಕಲೆಯು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್ ವಿರುದ್ಧ ದಾಖಲೆಯ ಜಯ, ಇತಿಹಾಸ ನಿರ್ಮಾಣ – ಸೂಪರ್ 8ಕ್ಕೆ ಭಾರತ ಎಂಟ್ರಿ
ಸಮುದಾಯದ ಉಡುಗೆ-ತೊಡುಗೆ ಹಾಗೂ ಆಚರಣೆಗಳು ಬಹುವಿಶಿಷ್ಟ ಹಾಗೂ ವಿಭಿನ್ನವಾಗಿದ್ದು,ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿ-ಬೆಳೆಸಿ ಕಾಪಾಡಿಕೊಂಡು ಬಂದಿದೆ. ಇಂತಹ ಸಾಂಸ್ಕೃತಿಕ ಪರಂಪರೆ-ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಯಾವುದೇ ತಾಂಡಾವು ಹೊರಗುಳಿಯದಂತೆ ನೋಡಿಕೊಂಡು ಹಕ್ಕು ಪತ್ರ ವಿತರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮೌಢ್ಯತೆ ತೊಡೆದು ಹಾಕಿದ ಶ್ರೀ ಸಂತ ಸೇವಾಲಾಲ ಅವರ ವಿಚಾರ-ಧಾರೆಗಳನ್ನು ಅರಿಯುವ ಮೂಲಕ ಅವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ್ ಅವರು, ಆಚರಣೆಗಳು ಕೇವಲ ಒಂದು ದಿನದ ಆಚರಣೆಯಾಗದೇ, ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವ ನಿಟ್ಟಿನಲ್ಲಿ ಪ್ರೇರಣೆ ಹೊಂದಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಂಜಾರ ಸಮಾಜದ ಮಹಿಳೆಯರ ಸಂಪ್ರದಾಯಬದ್ಧ ಉಡುಗೆಯಲ್ಲಿ ಅಡಕವಾಗಿರುವ ಕಲೆ ಮತ್ತು ಸಂಸ್ಕೃತಿ ವೈಭವವನ್ನು ಸಾರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿಗಳಾದ ಆನಂದ.ಕೆ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಅವರೋರ್ವ ದಾರ್ಶನಿಕರು, ಅವರ ತತ್ವಾದರ್ಶ ಅವರು ನೀಡಿದ ಸಂದೇಶ ಸಮಾಜಕ್ಕೆ ದಾರಿದೀಪವಾಗಿದೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉಪನ್ಯಾಸ ನೀಡಿದ, ನಾರಾಯಣ ಪವಾರ, ಸಂತ ಶ್ರೀ ಸೇವಾಲಾಲ ಜೀವನ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಬಹುವಿಸ್ತೃತವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ಉಪಮಹಾಪೌರರಾದ ಸುಮಿತ್ರಾ ಜಾಧವ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಧನಸಿಂಗ್ ಮಹಾರಾಜ, ಮಹಾದೇವ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ರಾಜಪಾಲ ಚವ್ಹಾಣ, ಕೇಸು ನಾಯಕ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.ಇದನ್ನೂ ಓದಿ: ಮಹಾಶಿವರಾತ್ರಿ | ಅದ್ದೂರಿಯಾಗಿ ನಡೆದ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವ

