ಕೋಲ್ಕತಾ: ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದ (Protests) ತೊಂದರೆಗೆ ಸಿಲುಕಿದವರು ಬಂದು ನಮ್ಮ ಸಹಾಯ ಕೇಳಿದರೆ ಅವರಿಗೆ ಆಶ್ರಯ ಒದಗಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ.
ಕೋಲ್ಕತಾದಲ್ಲಿ ಭಾರೀ ಮಳೆಯ ನಡುವೆ ನಡೆದ ಟಿಎಂಸಿಯ `ಹುತಾತ್ಮರ ದಿನ’ ರ್ಯಾಲಿಯಲ್ಲಿ ಅವರು ಮಾತನಾಡಿದರು. ಬಾಂಗ್ಲಾದ ಅಕ್ರಮ ವಲಸಿಗರಿಗೆ ಪಶ್ಚಿಮ ಬಂಗಾಳ ಸರ್ಕಾರ ಆಶ್ರಯ ನೀಡಿ, ಐಡಿ ಕಾರ್ಡ್‍ಗಳನ್ನು ಕೊಡಿಸಲು ನೆರವಾಗುತ್ತಿದೆ ಎಂಬ ಆರೋಪಗಳ ನಡುವೆ ಮಮತಾ ಬ್ಯಾನರ್ಜಿಯವರು ಹಿಂಸಾಚಾರದ ಸಂತ್ರಸ್ತರಿಗೆ ಆಶ್ರಯದ ಆಹ್ವಾನ ನೀಡಿದ್ದಾರೆ.
Advertisement
ಬಾಂಗ್ಲಾದೇಶದಲ್ಲಿ ಸರ್ಕಾರವು ರಾಷ್ಟ್ರವ್ಯಾಪಿ ಕರ್ಫ್ಯೂವನ್ನು ವಿಸ್ತರಿಸಿದ್ದು, ಹಿಂಸಾಚಾರವನ್ನು ಹತ್ತಿಕ್ಕಲು ಪೊಲೀಸರಿಗೆ ಕಂಡಲ್ಲಿ ಗುಂಡು ಹಾರಿಸುವ ಅಧಿಕಾರ ಕೊಟ್ಟಿದೆ. ಬಾಂಗ್ಲಾ ಬೇರೆ ದೇಶವಾಗಿರುವ ಕಾರಣ ಅದರ ಬಗ್ಗೆ ನಾನು ಏನೂ ಮಾತನಾಡಲು ಸಾಧ್ಯವಿಲ್ಲ. ಅದರ ಕುರಿತು ಕೇಂದ್ರ ಸರ್ಕಾರ ಮಾತನಾಡಲಿದೆ. ಆದರೆ ಬಾಂಗ್ಲಾದೇಶದಿಂದ ಅಸಹಾಯಕ ಜನರು ಬಂದು ಬಂಗಾಳದ ಬಾಗಿಲು ತಟ್ಟಿದರೆ, ನಾವು ಅವರಿಗೆ ಆಶ್ರಯ ನೀಡಲಿದ್ದೇವೆ. ಈ ಕುರಿತು ವಿಶ್ವಸಂಸ್ಥೆಯಲ್ಲಿಯೇ ನಿರ್ಣಯವಿದೆ ಎಂದು ಅವರು ತಿಳಿಸಿದ್ದಾರೆ.
Advertisement
ಹತ್ಯೆಗೊಳಗಾದ ವಿದ್ಯಾರ್ಥಿಗಳಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕೋಟಾ ಕಡಿತಗೊಳಿಸಿದ ಬಾಂಗ್ಲಾ ಸುಪ್ರೀಂ ಕೋರ್ಟ್
ಬಾಂಗ್ಲಾದೇಶದಲ್ಲಿ ಹಲವಾರು ದಿನಗಳಿಂದ ಆಕ್ರೋಶಕ್ಕೆ ಗುರಿಯಾಗಿರುವ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕೋಟಾ ವ್ಯವಸ್ಥೆಯ ಪ್ರಮಾಣವನ್ನು ಅಲ್ಲಿನ ಸುಪ್ರೀಂ ಕೋರ್ಟ್ ಭಾನುವಾರ ಕಡಿತಗೊಳಿಸಿದೆ. ಆದರೆ ಮೀಸಲಾತಿ ನೀತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ ಎಂದು ವರದಿಯಾಗಿದೆ.
1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಹೋರಾಟದ ವೇಳೆ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರಿ ನಾಗರಿಕ ಸೇವಾ ಹುದ್ದೆಗಳಲ್ಲಿ 30% ರಷ್ಟು ಮೀಸಲಾತಿ ನೀಡುವ ವ್ಯವಸ್ಥೆಯನ್ನು ಅಲ್ಲಿನ ಹೈಕೋರ್ಟ್ ಮರುಸ್ಥಾಪಿಸಿತ್ತು. ಇದು ವಿದ್ಯಾರ್ಥಿಗಳು ಹಾಗೂ ಇತರೆ ಉದ್ಯೋಗಾಕಾಂಕ್ಷಿಗಳಲ್ಲಿ ಆಕ್ರೋಶದ ಕಿಡಿ ಹೊತ್ತಿಸಿತ್ತು.
ಹಿಂಸಾಚಾರದ ಬಳಿಕ ಸುಪ್ರೀಂಕೋರ್ಟ್, ಮೀಸಲಾತಿಯನ್ನು ಮರುಸ್ಥಾಪಿಸಿದ ಹೈಕೋರ್ಟ್ ಆದೇಶ ಕಾನೂನುಬಾಹಿರ ಎಂದು ಹೇಳಿದೆ. 93% ರಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆ ಆಧಾರದಲ್ಲಿ ಹಂಚಿಕೆ ಮಾಡಬೇಕು ಎಂದು ಅದು ಹೇಳಿದೆ. ಇನ್ನು 7% ರಷ್ಟನ್ನು ಕೋಟಾ ವ್ಯವಸ್ಥೆಗೆ ಮೀಸಲಿಟ್ಟು ಆದೇಶ ಹೊರಡಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಿಂಸಾಚಾರದ ಬಳಿಕ ಬಾಂಗ್ಲಾದೇಶದಿಂದ 1 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸಾಗಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು 151 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.