ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ (Sheikh Hasina) ದಾಖಲೆಯ ಜಯ ಸಾಧಿಸಿದ್ದು, ಸತತ 5ನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಈ ಬೆನ್ನಲ್ಲೇ ಪ್ರತಿಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದು, ವಿರೋಧ ಪಕ್ಷಗಳನ್ನು ಉಗ್ರಗಾಮಿ ಸಂಘಟನೆ ಎಂದು ಪ್ರಧಾನಿ ಟೀಕಿಸಿದ್ದಾರೆ.
ಒಟ್ಟು 300 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ (Awami League) ನೇತೃತ್ವದ ಪಕ್ಷವು ಸುಮಾರು 204 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಜೊತೆಗೆ ಮಿತ್ರ ಪಕ್ಷವಾದ ಜಾತಿಯಾ ಪಕ್ಷವು 9 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಭಾರತದ ವಿರುದ್ಧ ಅಪಮಾನಕರ ಹೇಳಿಕೆ – ಮಾಲ್ಡೀವ್ಸ್ ಸಚಿವರ ಅಮಾನತು
ಬಹುತೇಕ ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಎದುರಾಳಿಗಳೇ ಇರಲಿಲ್ಲ. ಆದರೆ ಶಾಸನಸಭೆಗೆ ಏಕಪಕ್ಷದ ಸಂಸ್ಥೆ ಎಂಬ ಹಣೆಪಟ್ಟಿ ಬರಬಾರದು ಎಂಬ ಕಾರಣಕ್ಕೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿರಲಿಲ್ಲ. 300 ಕ್ಷೇತ್ರಗಳಲ್ಲಿ 264 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಈ ಪೈಕಿ 204 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದುಕೊಂಡಿದೆ. ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಬಹುತೇಕ ಮುಖಂಡರನ್ನು ಬಂಧಿಸಲಾಗಿದ್ದು, ಸಾರ್ವತ್ರಿಕ ಮುಷ್ಕರಕ್ಕೆ ಪಕ್ಷ ಕರೆ ನೀಡಿವೆ. ಇತರ ವಿರೋಧ ಪಕ್ಷಗಳೂ ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು.
ಈಗಾಗಲೇ ಲಭ್ಯವಿರುವ ಫಲಿತಾಂಶಗಳೊಂದಿಗೆ ಅವಾಮಿ ಲೀಗ್ ಪಕ್ಷವನ್ನು ವಿಜೇತರೆಂದು ಕರೆಯಬಹುದು. ಆದ್ರೆ ಉಳಿದ ಕ್ಷೇತ್ರಗಳಮತ ಎಣಿಕೆ ಮುಗಿದ ನಂತರ ಅಂತಿಮವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು
ಹಾಲಿ ಪ್ರಧಾನಿ ಹಸೀನಾ ಪ್ರತಿಸ್ಪರ್ಧಿ ಎಂ.ನಿಜಾಮ್ ಉದ್ದೀನ್ ಲಷ್ಕರ್ ವಿರುದ್ಧ 2,49,965 ಮತಗಳನ್ನು ಪಡೆದುಕೊಂಡಿದ್ದಾರೆ. ನಿಜಾಮ್ ಉದ್ದೀನ್ ಕೇವಲ 469 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ