ಕೋಲ್ಕತ್ತಾ: ಮೇ 13 ರಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನ ಸಂಸದ ಅನ್ವರುಲ್ ಅಜೀಮ್ ಅನಾರ್ (Anwarul Azim Anar) ಅವರು ಇಂದು ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೇ 12ರಂದು ವೈದ್ಯಕೀಯ ತಪಾಸಣೆಗಾಗಿ ಸಂಸದರು ಭಾರತಕ್ಕೆ ಬಂದಿದ್ದರು. ಆದರೆ ಮರುದಿನದಿಂದ ಅವರು ಕಾಣೆಯಾಗಿದ್ದರು. ಈ ಸಂಬಂಧ ಅವರ ಮನೆಯವರು ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು (Bangladesh MP) ಸಂಸದರ ಹುಡುಕಾಟ ನಡೆಸುತ್ತಿದ್ದರು. ಇಂದು ಬೆಳಗ್ಗೆ ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಸಂಸದರ ಶವ ಪತ್ತೆಯಾಗಿದೆ.
ವರದಿಗಳ ಪ್ರಕಾರ, ನ್ಯೂ ಟೌನ್ ಕಟ್ಟಡದಲ್ಲಿ ಹಲವಾರು ರಕ್ತದ ಕಲೆಗಳು ಕಂಡುಬಂದಿವೆ. ಅಲ್ಲಿ ಅನ್ವರುಲ್ ಅಜೀಂನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸಂಸದರನ್ನು ಕೊಲೆ ಮಾಡಿ ಶವವನ್ನು ಈ ಪ್ರದೇಶದಲ್ಲಿ ಬಿಸಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಅವರು ಢಾಕಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋಲ್ಕತ್ತಾದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ. ಅನ್ವರುಲ್ ಅಜೀಂ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂಬುದಾಗಿ ತಿಳಿದುಬಂದಿದೆ. ಇದೊಂದು ಯೋಜಿತ ಕೊಲೆ ಎಂದು ಖಾನ್ ಹೇಳಿದರು.