ಢಾಕಾ: ಆಜಾನ್ ಮತ್ತು ನಮಾಜ್ (Namaz) ವೇಳೆ ಎಲ್ಲಾ ಮಂದಿರ ಹಾಗೂ ಪ್ರಾರ್ಥನಾಲಯಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ (Bangladesh) ಸರ್ಕಾರ ಸೂಚಿಸಿದೆ. ನಮಾಜ್ ಹಾಗೂ ಆಜಾನ್‍ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹೊಸದಾಗಿ ರಚಿನೆಯಾಗಿರುವ ಮಧ್ಯಂತರ ಸರ್ಕಾರ ಹಿಂದೂ ಸಮುದಾಯಕ್ಕೆ (Hindu) ತಾತ್ಕಾಲಿಕವಾಗಿ ದುರ್ಗಾ ಪೂಜೆ (Durga Puja) ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಸೂಚಿಸಿದೆ. ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನಿಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: Madhya Pradesh | ಸೇನಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಸ್ನೇಹಿತೆಯ ಗ್ಯಾಂಗ್ ರೇಪ್
ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿ ದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ಉನ್ನತ ಮಟ್ಟದ ಸಭೆಯ ನಂತರ ಈ ಸೂಚನೆ ನಿಡಲಾಗಿದೆ. ಈ ಮಾರ್ಗಸೂಚಿಗಳನ್ನು ಅನುಸರಿಸಲು ಮಂದಿರಗಳ ಸಮಿತಿಗಳು ಒಪ್ಪಿಕೊಂಡಿವೆ ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಂಡಿ ಜಹಾಂಗೀರ್ ಆಲಂ ಚೌಧರಿ ತಿಳಿಸಿದ್ದಾರೆ.
ಢಾಕಾ ಸೌತ್ ಸಿಟಿಯಲ್ಲಿ 157 ಮತ್ತು ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್‌ಗಳಲ್ಲಿ 88 ಸೇರಿದಂತೆ ದೇಶಾದ್ಯಂತ 32,666 ಪೂಜಾ ಮಂಟಪಗಳನ್ನು (ತಾತ್ಕಾಲಿಕ ಪೂಜಾ ಸ್ಥಳಗಳು) ಸ್ಥಾಪಿಸಲಾಗುತ್ತದೆ. ಕಳೆದ ವರ್ಷದ 33,431 ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಮಂಟಪಗಳ ಸ್ಥಾಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ವೇಳೆ ಯಾವುದೇ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ವಿಗ್ರಹಗಳ ನಿರ್ಮಾಣದಿಂದ ಪ್ರಾರಂಭಿಸಿ ಎಲ್ಲಾ ಪೂಜಾ ಸ್ಥಳಗಳಲ್ಲಿಯೂ 24 ಗಂಟೆಗಳ ಭದ್ರತೆಯನ್ನು ಒದಗಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಚೌಧರಿಯವರು ತಿಳಿಸಿದ್ದಾರೆ.
ನಮ್ಮದು ಕೋಮು ಸೌಹಾರ್ದತೆಯನ್ನು ಗೌರವಿಸುವ ರಾಷ್ಟ್ರವಾಗಿದೆ. ಶಾಂತಿಯನ್ನು ಕದಡುವ ಕಾರ್ಯಗಳಲ್ಲಿ ಯಾರೂ ತೊಡಗಬಾರದು. ಕಾನೂನನ್ನು ಕೈಗೆತ್ತಿಕೊಂಡು ಅವ್ಯವಸ್ಥೆ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ