ಢಾಕಾ: 2024ರ ಜುಲೈ-ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಅಪರಾಧಿ ಎಂದು ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ತೀರ್ಪು ನೀಡಿದ್ದು, ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ (Bangladesh Government), ಹಸೀನಾರನ್ನ ಹಸ್ತಾಂತರಿಸುವಂತೆ ಭಾರತಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.
ವಿಶೇಷ ನ್ಯಾಯಲಯದಿಂದ ಹೊರಬಂದ ಆದೇಶದ ಹಿನ್ನಲೆಯಲ್ಲಿ ಭಾರತಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹಸೀನಾರನ್ನ ಹಸ್ತಾಂತರಿಸುವಂತೆ ಕೋರಿ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಬಾಂಗ್ಲಾದೇಶದ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೊಸೈನ್, 2024 ರ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ಅಹಿಂಸಾತ್ಮಕ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯದಲ್ಲಿ ಶೇಖ್ ಹಸೀನಾ ಅವರ ಪಾತ್ರದ ಬಗ್ಗೆ ನೀಡಲಾದ ತೀರ್ಪಿನ ವಿವರಗಳನ್ನು ಒಳಗೊಂಡ ಪತ್ರವನ್ನು ಎರಡು ದಿನಗಳ ಹಿಂದೆಯೇ (ನ.21) ಪತ್ರ ಕಳುಹಿಸಲಾಗಿದೆ ಭಾರತಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನ.20ರಂದು ಬಾಂಗ್ಲಾದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಝ್ರುಲ್ ಅವರು, ಮಧ್ಯಂತರ ಸರ್ಕಾರವು ದೆಹಲಿಗೆ ಹಸೀನಾ ಮತ್ತು ಅವರ ಗೃಹ ಸಚಿವರನ್ನು ಹಿಂದಿರುಗಿಸುವಂತೆ ಪತ್ರ ಬರೆಯುವುದಾಗಿ ತಿಳಿಸಿದ್ದರು.
ಬಾಂಗ್ಲಾ ಹಿಂಸಾಚಾರ:
ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದ ದೊಡ್ಡ ಹಿಂಸಾಚಾರ ನಡೆದಿತ್ತು. ಜುಲೈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಮೀಸಲಾತಿ ರದ್ದುಗೊಳಿಸುವಂತೆ ಪಟ್ಟು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಮೊದಲು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನ ಹತ್ತಿಕ್ಕಲು ಶೇಖ್ ಹಸೀನಾ ಆದೇಶ ನೀಡಿದರು. ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ನಂತರ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿತ್ತು. ಅನೇಕ ಜನ ಪ್ರಾಣ ಕಳೆದುಕೊಂಡರು.


