-ಭಾರತದಲ್ಲೇ 34 ವರ್ಷ ಕಳೆದರೂ ಸಿಗದ ಪೌರತ್ವ
-ಪೌರತ್ವ ಮಸೂದೆ ಜಾರಿಯಾದ್ರೂ ಅನುಷ್ಠಾನ ವಿಳಂಬ
ರಾಯಚೂರು: ಕಳೆದ 34 ವರ್ಷಗಳಿಂದ ಭಾರತದಲ್ಲೇ ವಾಸವಾಗಿದ್ದರೂ ಪೌರತ್ವ ಸಿಗದೇ ರಾಯಚೂರಿನ 5 ಪುಟ್ಟ ಗ್ರಾಮಗಳ ಜನ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ರೂ ಉನ್ನತ ವ್ಯಾಸಂಗಕ್ಕೆ ಜಾತಿ ಸಮಸ್ಯೆಯಾಗಿದೆ. ಭೂಮಿ ಇದ್ದರೂ ಅದರ ಮೇಲೆ ಯಾವುದೇ ಅಧಿಕಾರವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ವಲಸೆ ಬಂದ ಜನರು ಇನ್ನೂ ಭಾರತೀಯರಾಗಿಲ್ಲ.
ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಭಜನೆಯಾದ ವೇಳೆ 1969-70ರಲ್ಲಿ ಸುಮಾರು ಜನ ಹಿಂದೂಗಳು ರಾಯಚೂರಿನ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದ್ರು. ಸರ್ಕಾರ ಇವರಿಗೆಲ್ಲಾ ಪುನರ್ವಸತಿ ಕಲ್ಪಿಸಿತು. ಪುನಃ 1983 ರಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿ ಮತ್ತಷ್ಟು ಜನ ಮನೆ ಮಠ ತೊರೆದು ಬಾಂಗ್ಲಾದೇಶದಿಂದ ಭಾರತ ಸರ್ಕಾರ ಗುರುತಿಸಿದಂತೆ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದರು. ಹೀಗೆ ಬಂದ ಸುಮಾರು ಐದು ಸಾವಿರ ಜನರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.
ಸಿಂಧನೂರು ತಾಲೂಕಿನ ಐದು ಪುನರ್ವಸತಿ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿರುವ, ಈ ಮೊದಲು ಬಂದವರನ್ನೂ ಸೇರಿ ಒಟ್ಟು 25 ಸಾವಿರ ಜನರಿಗೆ ಜಾತಿ ಪ್ರಮಾಣ ಪತ್ರವಿಲ್ಲ. ಸರ್ಕಾರವೇ ನೀಡಿದ ಐದು ಎಕರೆ ಜಮೀನಿಗೆ ಇದುವರೆಗೆ ಪಟ್ಟಾ ನೀಡಿಲ್ಲ. 34 ವರ್ಷಗಳು ಕಳೆದರೂ ಭಾರತದ ಪೌರತ್ವವಿಲ್ಲದೆ ಇನ್ನೂ ವಲಸಿಗರಾಗಿ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಅಂತ ಆರ್‍ಎಚ್ ಕ್ಯಾಂಪ್-2 ನಿವಾಸಿ ಪಂಕಜ್ ಸರ್ಕಾರ್ ಅಳಲನ್ನ ತೋಡಿಕೊಂಡಿದ್ದಾರೆ.
ಜಾತಿ ಪ್ರಮಾಣ ಪತ್ರವಿಲ್ಲದೆ ಶೈಕ್ಷಣಿಕ, ಉದ್ಯೋಗ ಮಿಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಮತದಾನ ಗುರುತಿನ ಚೀಟಿ, ಆಧಾರ್, ರೇಷನ್ ಕಾರ್ಡ್ ಇದ್ದರೂ ಜಾತಿ ಪ್ರಮಾಣ ಪತ್ರವಿಲ್ಲ. ಜಮೀನಿಗೆ ಕೇವಲ ಸಾಗುವಳಿ ಚೀಟಿ ಇರುವುದರಿಂದ ಬ್ಯಾಂಕ್ ಸಾಲ, ಸೌಲಭ್ಯಗಳನ್ನ ಪಡೆಯಲು ಆಗುತ್ತಿಲ್ಲ. ಈಗಾಗಲೇ ಪೌರತ್ವ ನೀಡುವ ಕುರಿತು ಮಸೂದೆ ಮಂಡನೆಯಾಗಿದೆ. ಆದ್ರೆ ಕಾಯಿದೆ ಜಾರಿಗೆ ರೂಪುರೇಷೆಗಳನ್ನ ಸಿದ್ದಪಡಿಸುವುದು ಬಾಕಿಯಿದ್ದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.
ಒಟ್ಟನಲ್ಲಿ ದೇಶಬಿಟ್ಟು ದೇಶಕ್ಕೆ ಬಂದ ಜನ ಇಲ್ಲಿ ನೆಲೆ ಕಂಡುಕೊಂಡಿದ್ದಾರಾದ್ರೂ ಕೆಲ ಭಾರತೀಯ ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೌಲಭ್ಯಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರೂ ಇನ್ನೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಈಗಲಾದ್ರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಗಮನಹರಿಸಬೇಕಿದೆ.