ಬಳ್ಳಾರಿ: ಸಂಡೂರು ಉಪಚುನಾವಣೆಗೆ (Sandur By Election) ಟಿಕೆಟ್ ಘೋಷಣೆ ಘೋಷಣೆಯಾಗಿದ್ದು ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತುಗೆ (Bangaru Hanumanthu) ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಮೂಲತಃ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯವರಾದ ಬಂಗಾರು ಹನುಮಂತು ತಂದೆ ಬಂಗಾರು ಸೋಮಣ್ಣ ಕೆಎಸ್‌ಆರ್‌ಟಿಸಿ ಚಾಲಕರಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಸೋಮಣ್ಣ ಕೊನೆಯದಾಗಿ ಕೂಡ್ಲಿಗಿಯಲ್ಲಿ ಸೇವೆ ಮಾಡಿದ ಹಿನ್ನೆಲೆಯಲ್ಲಿ ಕೂಡ್ಲಿಗಿಯಲ್ಲಿ ಕುಟುಂಬ ನೆಲೆ ನಿಂತಿದೆ.
ತಾಯಿ ಹುಲಿಗೆಮ್ಮ ಸದ್ಯ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದಾರೆ. ಬಂಗಾರು ಹನುಮಂತು ವಿದ್ಯಾರ್ಥಿ ಜೀವನ ಕೂಡ್ಲಿಗಿಯಲ್ಲಿ ಕಳೆದಿದ್ದಾರೆ. ಬಿಎ, ಬಿಎಡ್ ಓದಿರುವ ಬಂಗಾರು ವಿದ್ಯಾರ್ಥಿ ಜೀವನದಿಂದ ಹೋರಾಟದಲ್ಲಿ ಭಾಗಿಯಾಗುತ್ತಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಶಿಗ್ಗಾವಿ ಉಪಚುನಾವಣೆ| ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದ್ದು ಯಾಕೆ?
2018ರಲ್ಲಿ ಸಂಡೂರು ಕ್ಷೇತ್ರದಲ್ಲಿ ಬಂಡಾಯ ಬಿಜೆಪಿ (BJP) ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿ ಸೋತಿದ್ದರು. 2023ರ ವಿಧಾನಸಭಾ ಚುನಾವಣೆ ವೇಳೆ ಕೂಡ್ಲಿಗಿ ಕ್ಷೇತ್ರಕ್ಕೆ ಪ್ರಯತ್ನ ಮಾಡಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.
ಕಲ್ಲಿನ ಕ್ರಷರ್, ಗಣಿಗಾರಿಕೆ ವ್ಯವಹಾರ ಮಾಡುತ್ತಿದ್ದು, ಕೃಷಿ ಜಮೀನು ಹೊಂದಿದ್ದಾರೆ. ಪ್ರಹ್ಲಾದ್ ಜೋಷಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಬಂಗಾರು ಹನುಮಂತು ವಿಜಯೇಂದ್ರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
2006 ರಿಂದ 2009 ರವರೆಗೆ ಕೂಡ್ಲಿಗಿ ಮಂಡಲ ಯುವ ಮೋರ್ಚಾ ಅಧ್ಯಕ್ಷ, 2017 ರಿಂದ 2019 ರವರೆಗೆ ಜಿಲ್ಲಾ ಕಾರ್ಯಕಾರಿ ಸದಸ್ಯ, 2020 ರಿಂದ 2022 ರವರೆಗೆ ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ.
ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್ ಪರಾಭವಗೊಂಡಿದ್ದರು.