ಬೆಂಗಳೂರು: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (BWSSB) ಕಾನೂನು ಅಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ, ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವವುಳ್ಳ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಡಳಿಯ ಮುಖ್ಯ ಆಡಳಿತಾಧಿಕಾರಿಗಳು/ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕಾನೂನು ಅಧಿಕಾರಿ ಹುದ್ದೆಗೆ ಸಂಭಾವನೆ ತಿಂಗಳಿಗೆ 1.15 ಲಕ್ಷ ರೂ. ಹಾಗೂ ವಾಹನ ಭತ್ಯೆ 35 ಸಾವಿರ ರೂ. ನಿಗದಿಪಡಿಸಲಾಗಿದೆ. ಸದರಿಯವರ ಸೇವೆಯನ್ನು 02 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 1 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಮುಂದಿನ 1 ವರ್ಷದವರೆಗೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ. ಸೇವೆ ಸಲ್ಲಿಸಲು ಇಚ್ಛಿಸುವವರು ನ್ಯಾಯಾಂಗ ಇಲಾಖೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕನಿಷ್ಠ 5 ವರ್ಷಗಳ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರಬೇಕು. ಹಿಂದಿನ ಸೇವೆಯಿಂದ ವಜಾಗೊಂಡಿರಬಾರದು. ಯಾವುದೇ ಇಲಾಖೆ ವಿಚಾರಣೆ/ಶಿಸ್ತುಕ್ರಮಗಳಿಂದ ಹೊರತಾಗಿರಬೇಕು. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಅಂತಿಮ ವರದಿ ಸಲ್ಲಿಕೆಗೆ ಜು.31ರವರೆಗೆ ಅವಧಿ ವಿಸ್ತರಣೆ
ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವ ಹಾಗೂ ಮಾಹಿತಿಯುಳ್ಳ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದು, ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ (ವೈಯಕ್ತಿಕ ವಿವರ, ಸರ್ಕಾರಿ ಸೇವೆ ಸಲ್ಲಿಸಿರುವ ವಿವರ ಹಾಗೂ ಪಿಂಚಣಿ ಪುಸ್ತಕದ ನಕಲು ಪ್ರತಿ) ಸಂಪೂರ್ಣ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆ ಹೊರಡಿಸಿದ 15 ದಿನದೊಳಗೆ ಮುಚ್ಚಿದ ಲಕೋಟೆಯಲ್ಲಿ ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, 1ನೇ ಮಹಡಿ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು-560009 ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಸಲ್ಲಿಸಬಹುದು.
ಕಾನೂನು ಸಲಹೆಗಾರರ ಕರ್ತವ್ಯಗಳು ಹಾಗೂ ನಿಬಂಧನೆಗಳು/ಷರತ್ತುಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್ ಅಥವಾ ದೂ:080-22945107 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ತುಳುನಾಡಿನ ದೈವದ ನುಡಿಗೆ ತಲೆಬಾಗಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ