ಬೆಂಗಳೂರು: ನೈಸ್ ರಸ್ತೆ ಗುಂಡಿಮಯವಾಗಿದ್ದನ್ನು ಮನಗಂಡು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಇಂದು ನೈಸ್ ರಸ್ತೆಯಲ್ಲಿ ಸಂಚರಿಸಿ ವೀಕ್ಷಿಸಿದ್ದಾರೆ. ಇದೇ ವೇಳೆ ನೈಸ್ ರಸ್ತೆಯ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ವಾರದೊಳಗೆ ಗುಂಡಿ ಮುಚ್ಚುವಂತೆ ಗಡುವು ವಿಧಿಸಿದ್ದಾರೆ.
ನೈಸ್ ರಸ್ತೆ ಪರಿಶೀಲನೆ ನಂತರ ಮಾತನಾಡಿದ ಡಿಸಿಎಂ, ನೈಸ್ ರಸ್ತೆಯ ವ್ಯವಸ್ಥೆ ನೋಡಲು ಬಂದಿದ್ದೆ, ನೈಸ್ ರಸ್ತೆಯಲ್ಲಿ ಗುಂಡಿಗಳು ಹೆಚ್ಚಿವೆ. ಗುಂಡಿಗಳನ್ನು ಮುಚ್ಚುವ ಕುರಿತು ಅಶೋಕ್ ಖೇಣಿ ಅವರಿಗೆ ತಿಳಿಸಿದ್ದೇವೆ. ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚುವ ಭರವಸೆಯನ್ನು ನೀಡಿದ್ದಾರೆ. ಒಂದು ವಾರದ ಬಳಿಕ ಮತ್ತೆ ಇಲ್ಲಿಗೆ ಬಂದು ಪರಿಶೀಲನೆ ನಡೆಸುವ ಪ್ರಯತ್ನ ಮಾಡುತ್ತೇನೆ. ಇದರೊಂದಿಗೆ ಟೋಲ್‍ಗಳ ಪ್ರವೇಶ ಹಾಗೂ ನಿರ್ಗಮನದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ಸಹ ಸರಿ ಮಾಡಲು ಅವರಿಗೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.
Advertisement
Advertisement
ನೈಸ್ ಸಂಸ್ಥೆ ಒಪ್ಪಂದ ಉಲ್ಲಂಘಿಸಿದೆ ಎಂದು ಡಿಸಿಎಂ ಒಪ್ಪಿಕೊಂಡಿದ್ದು, ಸಿಮೆಂಟ್ ರಸ್ತೆ ಮಾಡಿದ ಬಳಿಕವೇ ಸಂಚಾರಕ್ಕೆ ಮುಕ್ತಗೊಳೊಸಬೇಕಿತ್ತು. ಕಾಂಕ್ರೀಟ್ ರಸ್ತೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಯಾಕೆ ಕೆಲವು ಕಡೆ ಕಾಂಕ್ರೀಟ್ ರಸ್ತೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ತಾಂತ್ರಿಕ ಕಾರಣ ಇದೆ ಎಂದು ಖೇಣಿ ತಿಳಿಸಿದರು. ಈ ತಾಂತ್ರಿಕ ಕಾರಣ ಸರಿಪಡಿಸಿಕೊಂಡು ಕಾಂಕ್ರೀಟ್ ರಸ್ತೆ ಮಾಡಲು ಸೂಚಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
Advertisement
ನೈಸ್ ಸದನ ಸಮಿತಿ ವರದಿ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ವರದಿ ಮಂಡನೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಅಡೆತಡೆ ನಿವಾರಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
Advertisement
ಇಂದು ಅಶೋಕ್ ಖೇಣಿ, ಡಿಸಿಎಂ ಅಶ್ವತ್ಥ ನಾರಾಯಣ, ಶಾಸಕ ಎಂ.ಕೃಷ್ಣಪ್ಪ ಗುಂಡಿಗಳ ವೀಕ್ಷಣೆ ಮಾಡಿದರು. ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯ ವರೆಗೆ ನೈಸ್ ರೋಡ್ ಪೂರ್ತಿ ರೌಂಡ್ಸ್ ಹೊಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೈಸ್ ರೋಡ್ ಗುಂಡಿಮಯವಾಗಿತ್ತು. ಹೀಗಾಗಿ ಖುದ್ದು ಡಿಸಿಎಂ ಅಶ್ವತ್ಥ ನಾರಾಯಣ್ ಅವರೇ ರೌಂಡ್ಸ್‍ಗೆ ಬಂದಿದ್ದರು. ನೈಸ್ ರಸ್ತೆ ಸುಮಾರು 40 ಕಿ.ಮೀ. ಇದೆ. ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ದೊಡ್ಡ ತೊಗುರ್ ಕೆರೆ ಅಭಿವೃದ್ಧಿ ಬಗ್ಗೆ ಒತ್ತು ನೀಡಲು ಚಿಂತನೆ ನಡೆಸಲಾಯಿತು.
ತುಮಕೂರು ರಸ್ತೆಯಿಂದ ಕೆಂಗೇರಿ ನೈಸ್ ರಸ್ತೆವರೆಗೂ ಡಿಸಿಎಂ ಪರಿಶೀಲನೆ ಮಾಡಲಿಲ್ಲ. ಇದೇ ಭಾಗದಲ್ಲಿ ಹೆಚ್ಚು ಗುಂಡಿಗಳಿರುವುದು ಎಂದು ಸಾರ್ವಜನಿಕರು ದೂರಿದ್ದಾರೆ.