ಬೆಂಗಳೂರು: ಭಾರತದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ 100 ಟ್ರಿಲಿಯನ್ ಡಾಲರ್ (7,539 ಲಕ್ಷ ಕೋಟಿ) ನಷ್ಟು ಅಗಾಧ ಮೊತ್ತವನ್ನು ಹೂಡಲಾಗುವುದು. ದೇಶದಲ್ಲಿ (India) ಬಂಡವಾಳ ಹೂಡಿಕೆದಾರರ ಪಾಲಿಗೆ ಹಿಂದಿನ ಕೆಂಪುಪಟ್ಟಿಯ ಸಮಸ್ಯೆ ಕೊನೆಗೊಂಡಿದ್ದು, ಈಗ ರತ್ನಗಂಬಳಿಯ ಸ್ವಾಗತವಿದೆ. ಅದರಲ್ಲೂ ಬೆಂಗಳೂರು (Bengaluru) ತಂತ್ರಜ್ಞಾನ (Technology), ನಾವೀನ್ಯತೆ (Innovation) ಮತ್ತು ಸಮರ್ಥ ನಾಯಕತ್ವದ (Leadership) ತವರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
Advertisement
25ನೇ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು (Bengaluru Tech Summit) ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಅವರು, ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ಅದರಲ್ಲೂ ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ ಎಂದರು. ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್‍ಗಳ ಒಕ್ಕೂಟದ ಸಹಯೋಗದಲ್ಲಿ ಈ ಸಮಾವೇಶವನ್ನು ಏರ್ಪಡಿಸಿದೆ. ಹೆಲ್ತ್ ಟೆಕ್, ಫಿನ್ ಟೆಕ್, ಎಡುಟೆಕ್ ಸೇರಿದಂತೆ ಎಲ್ಲ ರಂಗಗಳನ್ನೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಯುವಶಕ್ತಿಯಿಂದ ಕೂಡಿರುವ ಸಮಕಾಲೀನ ಜಗತ್ತಿನಲ್ಲಿ ಪ್ರತಿಭೆಯ ಜಾಗತೀಕರಣ ನಡೆಯುತ್ತಿದೆ. ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್‍ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್ ಆಗಿದೆ. ಜೊತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 40 ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡಿ, ಬೆಂಗಳೂರು ಹೊಗಳಿದ ಪ್ರಧಾನಿ ಮೋದಿ
Advertisement
Advertisement
ತಂತ್ರಜ್ಞಾನದ ಮೂಲಕ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣಗಳನ್ನು ಸಾಧಿಸಲಾಗುತ್ತಿದೆ. ಜೊತೆಗೆ, ಭ್ರಷ್ಟಾಚಾರಕ್ಕೂ ಇದು ತೆರೆ ಎಳೆದಿದೆ. ಭಾರತವಂತೂ ಈಗ ಮಾಹಿತಿ ಸೂಪರ್ ಹೈವೇ ಆಗಿದೆ. ಕೊರೊನಾ (Corona) ಪಿಡುಗಿನ ವಿರುದ್ಧ ಹೋರಾಟ, ಶಿಕ್ಷಣ, ನೇರ ನಗದು ವರ್ಗಾವಣೆ, ಜನ್‍ಧನ್, ಆಧಾರೆ, ಇ-ಮಾರ್ಕೆಟ್ (E-Market) ಎಲ್ಲವನ್ನೂ ಭಾರತವು ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ ಯಶಸ್ವಿಯಾಗಿ ಕೈಗೊಂಡಿದೆ. ಹೂಡಿಕೆದಾರರ ನಂಬಿಕೆ ಮತ್ತು ದೇಶದಲ್ಲಿರುವ ತಂತ್ರಜ್ಞಾನದ ಶಕ್ತಿ ಎರಡೂ ಸೇರಿದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾಗಲಿದೆ. ಇದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲಕರವಾಗಿದ್ದು, ದೊಡ್ಡ ಗ್ರಾಹಕರನ್ನು ಸೃಷ್ಟಿಸಿದೆ. ಈಗ ಗ್ರಾಮೀಣ ಭಾಗಗಳಲ್ಲಿ ಬ್ರಾಡ್‍ಬ್ಯಾಂಡ್ ಕ್ರಾಂತಿ ನಡೆಯುತ್ತಿದ್ದು, ಮೊಬೈಲ್‍ನ ವ್ಯಾಪಕ ಬಳಕೆಯಿಂದಾಗಿ ಪ್ರಪಂಚವೇ ಬೆರಗಿನಿಂದ ನೋಡುತ್ತಿರುವಂಥ ಡಿಜಿಟಲ್ ಆರ್ಥಿಕತೆ ನಮ್ಮಲ್ಲಿ ರೂಪುಗೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ‘ನಾನು ಮೋದಿ ಭಕ್ತ’ ಎಂದು ಬಹಿರಂಗವಾಗಿ ಘೋಷಿಸಿದ ನಟ ಅನಂತ್ ನಾಗ್
Advertisement
ಬೆಂಗಳೂರು ಟೆಕ್ ಸಮ್ಮಿಟ್ ನ ರಜತ ಮಹೋತ್ಸವದ ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ, ಕನ್ನಡ ನಾಡಿನ ಹಿರಿಮೆಯನ್ನು ಸಾರಿದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಸಮಸ್ತ ಕರುನಾಡಿನ ಪರವಾಗಿ ಧನ್ಯವಾದಗಳು.@narendramodi#BengaluruTeckSummit pic.twitter.com/KA7g27AAyN
— Basavaraj S Bommai (@BSBommai) November 16, 2022
ತಂತ್ರಜ್ಞಾನದ ಅಳವಡಿಕೆ ಮೂಲಕ ನಾವು 200 ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ನೀಡಿದ್ದೇವೆ. ಹಾಗೆಯೇ 200 ದಶಲಕ್ಷ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್ ಭಾರತ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಡೇಟಾ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.