ಬೆಂಗಳೂರು: ಪದವಿ ಪೂರ್ಣಗೊಳಿಸಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ಮತ್ತೊಮ್ಮೆ ಪರೀಕ್ಷೆ ಬರೆಯಲು ಒಂದು ಸುವರ್ಣ ಅವಕಾಶ ನೀಡಲು ಚಿಂತನೆ ನಡೆಸಿದೆ. ವಿವಿಯ ಹಳೆಯ ವಿದ್ಯಾರ್ಥಿಗಳಿಗೆ ಪದವಿ ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಡಲಿದೆ.
ಹಳೆಯ ವಿದ್ಯಾರ್ಥಿಗಳು ಪಾಸ್ ಆಗದ ವಿಷಯಗಳನ್ನು ಮತ್ತೆ ಪರೀಕ್ಷೆ ಬರೆದು ಪಾಸ್ ಮಾಡಿಕೊಳ್ಳುವ ಸುವರ್ಣ ಅವಕಾಶವನ್ನು ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಲಿದೆ ಎಂಬ ಮಾಹಿತಿ ಲಭಿಸಿದೆ.
2004ರಿಂದ 2019ರವರೆಗೆ ಇಂಜಿನಿಯರಿಂಗ್ ಒಳಗೊಂಡಂತೆ ಎಲ್ಲಾ ಪದವಿ ಕೋರ್ಸ್‌ಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ. ಇಂತಹ ಸಾವಿರಾರು ವಿದ್ಯಾರ್ಥಿಗಳ ಪೈಕಿ ಕೆಲವರು ಮತ್ತೊಮ್ಮೆ ಅವಕಾಶ ನೀಡುವಂತೆ ಬೆಂ.ವಿ.ವಿ.ಗೆ ಪತ್ರ ಬರೆದು ಮನವಿ ಮಾಡಿದ್ದರು. ಒಂದಾದ ಮೇಲೆ ಒಂದರಂತೆ ಸಾಕಷ್ಟು ಮನವಿ ಪತ್ರಗಳು ವಿವಿಗೆ ಬಂದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಅದಷ್ಟು ಬೇಗ ಪ್ರಕಟಣೆ ಹೊರಡಿಸಿ 2004 ರಿಂದ 2019 ರ ನಡುವೆ ವ್ಯಾಸಂಗ ಮಾಡಿ ಪದವಿ ಪಡೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸುವ ಅವಕಾಶ ಮಾಡಿಕೊಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. ಅನುತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸುವ ಆಶಾಕಿರಣ ಮತ್ತೊಮ್ಮೆ ಮೂಡಿದೆ.