ನಟ ದುನಿಯಾ ವಿಜಯ್ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ. ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜೊತೆ ನಡೆದುಕೊಂಡೇ ನಂಜನಗೂಡು ತಲುಪಿದ್ದಾರೆ. ಹಗಲು ರಾತ್ರಿ ಲೆಕ್ಕಿಸದೇ ಪಾದಯಾತ್ರೆ ಮಾಡಿದ್ದಾರೆ ವಿಜಯ್.
ಸದ್ಯ ಭೀಮ ಸಿನಿಮಾದ ಶೂಟಿಂಗ್ ಮುಗಿಸಿರುವ ವಿಜಯ್, ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಈ ಹೊಸ ಚಿತ್ರಕ್ಕೆ ಮೊನ್ನೆಯಷ್ಟೇ ರಾಜ್ ಬಿ ಶೆಟ್ರಿ (Raj B Shetty) ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಲಿದ್ದಾರೆ. ಆ ಪಾತ್ರ ಏನು ಅನ್ನುವುದನ್ನು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಲಿದೆ.
ದುನಿಯಾ ವಿಜಯ್ ಮತ್ತು ರಚಿತಾ ರಾಮ್ (Rachita Ram) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ಮುಹೂರ್ತವಾಗಿದೆ (Muhurta). ಇನ್ನೂ ಚಿತ್ರಕ್ಕೆ ಹೆಸರು ಇಟ್ಟಿಲ್ಲವಾದರೂ, ಈ ಕಾಂಬಿನೇಷನ್ ನ 2ನೇ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ (Monica Vijay) ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೋನಿಕಾ ಚಿತ್ರೋದ್ಯಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.
ಈ ಸಿನಿಮಾವನ್ನು ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದರೆ, ಜಡೇಶ್ ಕೆ.ಹಂಪಿ ಅವರ ನಿರ್ದೇಶನವಿದೆ. ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ನಂತರ ಈ ಜೋಡಿ ಒಂದಾಗುತ್ತಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.