ಬೆಂಗಳೂರು: ಗಾಂಜಾ ಮಾರಾಟದೊಂದಿಗೆ, ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಗ್ಯಾಂಗ್ ಸದಸ್ಯರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ತಮಿಳುನಾಡು ಮೂಲದ ಪರಮೇಶ್, ಸೈಯ್ಯದ್ ಫಾರೂಕ್, ಬಸವರಾಜ್, ಬಾಲಾಜಿ, ತಿಮ್ಮರಾಜು ಮತ್ತು ಅರುಣ್ ಹಾಗೂ ಬೆಂಗಳೂರು ಮೂಲದ ಸೈಯ್ಯದ್ ಸಾಧಿಕ್ ಮತ್ತು ಸೈಯ್ಯದ್ ದಾವುದ್ ಬಂಧಿತ ಆರೋಪಿಗಳು.
ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಸಹ ಕಳ್ಳತನ ಮಾಡುತ್ತಿದ್ದೇವು ಎಂದು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಒಟ್ಟು 25 ದ್ವಿಚಕ್ರ ವಾಹನಗಳು, 400 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 11 ದ್ವಿಚಕ್ರ ವಾಹನಗಳನ್ನು ಆರೋಪಿಗಳು ಕದ್ದಿದ್ದರು. ಇನ್ನೂ ಉಳಿದ 14 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.