ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಅವರು ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ಸಿಎಂ ಕುಮಾರಸ್ವಾಮಿ ಅವರು ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಬ್ ಅರ್ಬನ್ ಯೋಜನೆಗೆ ಕೇಂದ್ರದಿಂದ ಆಗಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಕೇಂದ್ರ ಸಚಿವರು ಮಾತನಾಡುವುದು ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
“ರಾಜ್ಯ ಸರ್ಕಾರದಿಂದ ಮೇಕೆದಾಟು ಯೋಜನೆ ಸಮಗ್ರ ಯೋಜನಾ ವರದಿ(ಡಿಪಿಆರ್) ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಸಬ್ ಅರ್ಬನ್ ರೈಲು ಯೋಜನೆಯ ಕುರಿತು ಚರ್ಚೆಯಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಸ್ವತಃ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ಸಭೆ ನಡೆದಿದೆ. ಎಲ್ಲ ತೊಡಕುಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆಸಿದ್ದರು. ಅದರಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಂದದ ಷರತ್ತುಗಳನ್ನು ಅನುಮೋದಿಸಿ ಕಳುಹಿಸಲಾಗಿತ್ತು. ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ನಿಜವಾಗಿಯೂ ಕಾಳಜಿ ಇದ್ದರೆ ‘ರಾಜಕೀಯ ಬೇಡ’ ಎನ್ನುವವವರು ರಾಜಕೀಯ ಬಿಟ್ಟು ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ” ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಡಿವಿಎಸ್ ಆರೋಪವೇನು?
ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದಗೌಡರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದರು.
ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದು ಹೇಳಿದ್ದರು.