ಬೆಂಗಳೂರು: ಶಾಸಕರ ಸರಣಿ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕರು ಕೊಡಗಿನ ರೆಸಾರ್ಟ್‍ಗೆ ಹೋಗಲು ಸಕಲ ಸಿದ್ಧತೆ ನಡೆದಿತ್ತು. ಆದರೆ ಈಗ ದಿಢೀರ್ ನಿರ್ಧಾರ ಬದಲಾವಣೆ ಮಾಡಿ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ತಂಗಿದ್ದಾರೆ.
ಆಪರೇಷನ್ ಕಮಲದ ಭೀತಿಯಿಂದ ತಮ್ಮ ಶಾಸಕರನ್ನು ರಕ್ಷಿಸಲು ಸೋಮವಾರಪೇಟೆ ತಾಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟ್‍ನಲ್ಲಿ ತಂಗಲು ರೂಂ ಬುಕ್ ಮಾಡಿದ್ದರು. ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಂ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.
ಮಡಿಕೇರಿಗೆ ಪ್ರಯಾಣ ಮಾಡಲು ತುಂಬ ಸಮಯ ಬೇಕು ಮತ್ತು ಏನಾದರೂ ದಿಢೀರ್ ಬದಲಾವಣೆಯಾದರೆ ತಕ್ಷಣ ಬೆಂಗಳೂರಿಗೆ ಬರುವುದು ಕಷ್ಟ ಎಂಬ ಕಾರಣಕ್ಕೆ ಹತ್ತಿರದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟಿಗೆ ಜೆಡಿಎಸ್ ಹೋಗಿದ್ದಾರೆ ಎನ್ನಲಾಗಿದೆ. ಶಾಸಕರು ತಂಗಿರುವ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಡಾ.ಶ್ರೀನಿವಾಸ್ ಮೂರ್ತಿ, ಸುರೇಶ್ ಗೌಡ, ಬಂಡೆಪ್ಪ ಕಾಶಂಪೂರ್, ನಾಗನಗೌಡ ಕಂದಕೂರು, ಗೌರಿ ಶಂಕರ್, ವೆಂಕಟರಾವ್ ನಾಡಗೌಡ, ನಿಸರ್ಗ ನಾರಾಯಣಸ್ವಾಮಿ, ರಾಜಾ ವೆಂಕಟಪ್ಪ ನಾಯಕ, ಸಾರಾ ಮಹೇಶ್, ಸುರೇಶ್ ಗೌಡ, ಸತ್ಯ ನಾರಾಯಣ, ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ, ಪುಟ್ಟರಾಜು, ಡಿಸಿ ತಮ್ಮಣ್ಣ, ಲಿಂಗೇಶ್, ಮಹದೇವ್, ಬಾಲಕೃಷ್ಣ. ಮನಗೂಳಿ, ಎಚ್.ಕೆ.ಕುಮಾರಸ್ವಾಮಿ, ಕೃಷ್ಣಾ ರೆಡ್ಡಿ ರೆಸಾರ್ಟಿನಲ್ಲಿ ತಂಗಿದ್ದಾರೆ.
ರವೀಂದ್ರ ಶ್ರೀಕಂಠಯ್ಯ, ಮಂಜುನಾಥ, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್, ಎಚ್.ಡಿ.ರೇವಣ್ಣ, ಎಟಿ ರಾಮಸ್ವಾಮಿ, ಜಿಟಿ ದೇವೇಗೌಡ, ಶ್ರೀನಿವಾಸ ಗೌಡ, ಶಿವಲಿಂಗೇಗೌಡ, ಅಶ್ವಿನ್ ಕುಮಾರ್, ಎಂ ಶ್ರೀನಿವಾಸ್ ಗೈರಾಗಿದ್ದಾರೆ.