ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ವಿಭಿನ್ನ ರೀತಿಯ ನಟನೆಯಿಂದಲೇ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಅವರಿಗೆ ಈಗ ಇನ್ನೊಂದು ಹಿರಿಮೆ ಬಂದಿದೆ.
ಹೌದು ಎ, ಓಂ ರೀತಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಉಪ್ಪಿ ಅವರು ಪ್ರಪಂಚದ ಉತ್ತಮ 50 ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಚಲನಚಿತ್ರಗಳು, ಟೆಲಿವಿಷನ್ ಕಾರ್ಯಕ್ರಮಗಳು, ಹೋಮ್ ವಿಡಿಯೋಗಳು, ವಿಡಿಯೋ ಗೇಮ್‍ಗಳು ಮತ್ತು ಸ್ಟ್ರೀಮಿಂಗ್ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯ ಆನ್‍ಲೈನ್ ಡೇಟಾಬೇಸ್ ಆಗಿರುವ ಐಎಮ್‍ಡಿಬಿ ಸಂಸ್ಥೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಉಪೇಂದ್ರ ಸ್ಥಾನ ಪಡೆದಿದ್ದಾರೆ.
???????????????????? pic.twitter.com/iIbbV191Qu
— Upendra (@nimmaupendra) August 12, 2019
ಐಎಮ್‍ಡಿಬಿ ಸಂಸ್ಥೆಯೂ ಬಿಡುಗಡೆ ಮಾಡಿರುವ 50 ನಿರ್ದೇಶಕರ ಈ ಪಟ್ಟಿಯಲ್ಲಿ ಉಪೇಂದ್ರ ಅವರಿಗೆ 17 ನೇ ಸ್ಥಾನ ಸಿಕ್ಕಿದೆ. ಈ ಮೂಲಕ ಈ ಪಟ್ಟಿಗೆ ಆಯ್ಕೆಯಾದ ಏಕೈಕ ದಕ್ಷಿಣ ಭಾರತದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಉಪ್ಪಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಾಲಿವುಡ್‍ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಉಪ್ಪಿ ಅವರ ಜೊತೆ ಭಾರತದಿಂದ ಬಾಲಿವುಡ್‍ನಲ್ಲಿ ‘ಮುನ್ನಾಭಾಯಿ ಎಂ ಬಿ ಬಿ ಎಸ್’, ‘ತ್ರೀ ಈಡಿಯಟ್ಸ್’ ಮತ್ತು ‘ಪಿಕೆ’ ಸಿನಿಮಾಗಳ ಮೂಲಕ ದೊಡ್ಡ ಯಶಸ್ಸು ಪಡೆದಿರುವ ನಿರ್ದೇಶಕ ರಾಜ್ ಕುಮಾರ್ ಇರಾನಿ ಅವರಿಗೆ ಈ ಪಟ್ಟಿಯಲ್ಲಿ 2 ಸ್ಥಾನ ದೊರಕಿದೆ. ಇವರನ್ನು ಬಿಟ್ಟರೆ ಮೊತ್ತೊಬ್ಬ ಶ್ರೇಷ್ಠ ನಿರ್ದೇಶಕ ಸತ್ಯಜೀತ್ ರೇ ಅವರಿಗೂ ಈ ಪಟ್ಟಿಯಲ್ಲಿ 49ನೇ ಸ್ಥಾನ ಸಿಕ್ಕಿದೆ.
ತನ್ನ ವಿಭಿನ್ನ ನಿರ್ದೇಶನ ಮತ್ತು ಸಂಭಾಷಣೆ ಮೂಲಕವೇ ಹೆಸರು ಮಾಡಿದ್ದ ಉಪೇಂದ್ರ ಅವರು ಈವರೆಗೆ ಕನ್ನಡದಲ್ಲಿ ಒಂಬತ್ತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಜಗ್ಗೇಶ್ ಅಭಿನಯದ ತರ್ಲೆ ನನ್ ಮಗ, ಶಿವರಾಜ್ ಕೂಮಾರ್ ಅಭಿನಯದ ಓಂ, ಅವರೇ ಅಭಿನಯಿಸಿದ ಎ, ಉಪೇಂದ್ರ ಮತ್ತು ಸೂಪರ್ ನಂತಹ ಚಿತ್ರಗಳು ಸಖತ್ ಹಿಟ್ ಆಗಿವೆ.
ಉಪೇಂದ್ರ ಅವರು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಾಕಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಅಭಿಮಾನಿಗಳು ಮತ್ತೆ ನೀವು ಸಿನಿಮಾ ನಿರ್ದೇಶನ ಮಾಡಬೇಕು. ನಿಮ್ಮ ನಿರ್ದೇಶನದ ಸಿನಿಮಾ ನೋಡಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ.