ಆನೇಕಲ್: ಈಜಿಪುರ ಗ್ರಾಮದಲ್ಲಿ ಸ್ಥಾಪನೆಯಾಗಲಿರುವ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ಪ್ರತಿಮೆ ರಾಜ್ಯದ ಗಡಿ ಭಾಗವನ್ನು ತಲುಪಿದೆ.
ಬೆಂಗಳೂರಿನ ಈಜಿಪುರ ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಟ್ರಸ್ಟ್ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇಂದು ಆ ವಿಗ್ರಹ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಬಂದು ತಲುಪಿದೆ. ಬಹಳ ಕಷ್ಟದ ದಾರಿಯಲ್ಲೂ ತಿರುವಣ್ಣಾಮಲೈ ಸಮೀಪದ ವಂದವಾಸಿಯಿಂದ ವಿಗ್ರಹ ರಾಜ್ಯಕ್ಕೆ ಬಂದಿದ್ದು ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
Advertisement
ಈ ಬೃಹತ್ ವಿಗ್ರಹ ಸ್ಥಾಪಿಸಲು 2009 ರಲ್ಲಿ ತೀರ್ಮಾನಿಸಲಾಗಿದ್ದು ಅಂದಿನಿಂದ ವಿಗ್ರಹದ ಕಲ್ಲಿಗಾಗಿ ಹುಡುಕಾಟ ನಡೆಸಲಾಗಿತ್ತು. ಕನಕಪುರದ ಸಾತನೂರಿನ ಕ್ವಾರಿಯಲ್ಲಿ ಹುಡುಕಿದರೂ ವಿಗ್ರಹಕ್ಕೆ ಬಂಡೆ ಸಿಕ್ಕಿರಲಿಲ್ಲ. ಕೊನೆಗೆ ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ವಂದವಾಸಿಯಲ್ಲಿ ವಿಗ್ರಹಕ್ಕೆ ಕಲ್ಲು ದೊರೆತಿದ್ದು 2009 ರಿಂದ ಕಲ್ಲನ್ನು ಹೊರತೆಗೆಯುವ ಕೆಲಸ ನಡೆದಿತ್ತು. ನಂತರ 108 ಆಡಿಯ ಏಕಶಿಲಾ ವಿಶ್ವರೂಪಿ ವಿಷ್ಣುವಿನ ವಿಗ್ರಹ ತಯಾರಾಗಿ ರಾಜ್ಯಕ್ಕೆ ಸಾಗಿಸುವ ನಡುವೆ ಕೆಲವರು ರಸ್ತೆಯಲ್ಲಿ ಬೃಹತ್ ಶಿಲೆ ಸಾಗಿಸದಂತೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ತಮಿಳುನಾಡು ಸರ್ಕಾರದ ಸಹಾಯದಿಂದ ಆ ಎಲ್ಲ ಅಡೆತಡೆಗಳನ್ನು ದಾಟಿ ಇಂದು ರಾಜ್ಯದ ಗಡಿಗೆ ವಿಗ್ರಹ ಬಂದಿದೆ.
Advertisement
Advertisement
ಈ ಬಗ್ಗೆ ಮಾತನಾಡಿರುವ ಶ್ರೀಕೋದಂಡರಾಮಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಸದಾನಂದ, ವಿಗ್ರಹ ತರುವ ದಾರಿಯುದ್ದಕ್ಕೂ ಅನೇಕ ಅಡೆತಡೆಗಳು ಇದ್ದು ಅವೆಲ್ಲವನ್ನೂ ದಾಟಿ ಇಂದು ರಾಜ್ಯಕ್ಕೆ ವಿಗ್ರಹ ಬಂದಿರುವುದು ನಮಗೆ ಸಂತೋಷವಾಗಿದೆ. ಇನ್ನೂ ದಾರಿಯುದ್ದಕ್ಕೂ ಅನೇಕ ಸೇತುವೆಗಳಿದ್ದು ಅವುಗಳಿಗೆ ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡಿ ಕಳೆದ 6 ತಿಂಗಳ ಸತತ ಪ್ರಯತ್ನದಿಂದ ವಿಗ್ರಹ ಇಂದು ರಾಜ್ಯದ ಗಡಿ ಮುಟ್ಟಿದೆ. ಇನ್ನು ವಿಗ್ರಹದ ಕೆತ್ತನೆ ಕೆಲಸ ಬಾಕಿಯಿದ್ದು ಕೇವಲ ಒಂದು ಮುಖ ಮಾತ್ರ ಇದೀಗ ಕೆತ್ತಲಾಗಿದೆ. ವಿಶ್ವರೂಪಿ ವಿಷ್ಣುವಿನ ದಶಾವತಾರ ಈ ಶಿಲೆಯಲ್ಲಿ ಮೂಡಲಿದ್ದು ಈಜಿಪುರ ಕೆಲವೇ ದಿನಗಳಲ್ಲಿ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದ್ದಾರೆ.
Advertisement
ಒಟ್ಟಿನಲ್ಲಿ ಅನೇಕ ಅಡೆತಡೆಗಳ ನಡುವೆ ವಿಷ್ಣು ಶಿಲೆ ರಾಜ್ಯಕ್ಕೆ ಆಗಮಿಸಿದ್ದು ಅತ್ತಿಬೆಲೆಯಲ್ಲಿ ನೂರಾರು ಜನ ಭಕ್ತರು ಸೇರಿ ಪೂಜೆ ಸಲ್ಲಿಸಿ ಈಜಿಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಶ್ವರೂಪಿ ವಿಷ್ಣುವಿನ ವಿಗ್ರಹವನ್ನು ರಾಜ್ಯಕ್ಕೆ ತರಲು ಸಹಕರಿಸಿದ ತಮಿಳುನಾಡು ಸರ್ಕಾರ ಅಲ್ಲಿನ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಶ್ರೀಕೋದಂಡರಾಮಸ್ವಾಮಿ ಟ್ರಸ್ಟಿನ ಪದಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.