ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.
ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಜಾಗೃತಿ ಮೂಡಿಸಲು ಕಾರಣವೇನು?:
ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.
ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.