ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರಲ್ಲಿ ಸೋತಿದ್ದು ವರದಾನ ಅಂದುಕೊಳ್ತೀನಿ. ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ. ಅವರಿಗೆ ಕೆಟ್ಟದ್ದು ಬಯಸೋಕೆ ಹೋಗಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಸೋತಿದ್ದೆ ನನಗೆ ವರದಾನವಾಗಿದೆ. ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ. ಈ ಸೋಲು ನನ್ನಲ್ಲಿ ಹೋರಾಟದ ಕೆಚ್ಚನ್ನು ಇನ್ನೂ ಹೆಚ್ಚು ಮಾಡಿದೆ. ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ನೀವೆಲ್ಲ ನನ್ನ ಜೊತೆ ಇರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ಕೊಟ್ಟರು.
Advertisement
Advertisement
14 ತಿಂಗಳು ಸರ್ಕಾರ ಮಾಡಿ ಸರ್ಕಾರ ಪತನವಾಯಿತು. ಸರ್ಕಾರ ಹೋಗಲು ಯಾರು ಹೊಣೆ ಎಂದು ಗೊತ್ತಿಲ್ಲ. ಅದಕ್ಕೆ ನಾವು ಕಾರಣ ಇರಬಹುದು. ಅನೇಕರು ಯಾಕೆ ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಕೊಂಡ್ರಿ ಎಂದು ಕೇಳಿದರು. ಇದಕ್ಕೆ ನಾನೇ ಕಾರಣ ಇದರಿಂದ ನನ್ನ ಹಾದಿಯಾಗಿ ಅನೇಕರು ಸೋತರು. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಯಾರು 3 ಜನ ಹೊರಗೆ ಹೋದರು ಅವರ ವಿರುದ್ಧ ಕ್ಷೇತ್ರದ ಜನರ ಜೊತೆ ಮಾತನಾಡಿ ಅಭ್ಯರ್ಥಿ ಹಾಕ್ತೀವಿ. ಯಾರ ಬಗ್ಗೆ ನಾನು ದೋಷ ಮಾಡಲ್ಲ. ಎಲ್ಲದ್ದಕ್ಕೂ ನಾನೇ ಕಾರಣ ಎಂದು ಹೇಳಿದರು.
Advertisement
ನಾನು ದೇವರನ್ನು ನಂಬುತ್ತೇನೆ. ಆದರೆ ನನ್ನನ್ನೂ ಸೇರಿಸಿ ಎಲ್ಲಾ ಸೋತ ಮೇಲೆ ಯಾರನ್ನೂ ದೂಷಣೆ ಮಾಡಲ್ಲ. ಯಾರು ಹೋದರು, ಯಾರು ಇದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಉಳಿದಿರುವವರಲ್ಲೇ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತೇವೆ. ರಾಜ್ಯದಲ್ಲಿ ಮಳೆ ಆದರೂ ನೀವೆಲ್ಲ ಬಂದಿದ್ದೀರಿ ಅಂದರೆ ಪಕ್ಷ ಉಳಿಸುವ ಛಲ ನಿಮ್ಮಲ್ಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
Advertisement
ಚುನಾವಣೆ ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಮೂರು ವರ್ಷ ಹತ್ತು ತಿಂಗಳು ಸರ್ಕಾರ ಮಾಡೋದಿದ್ದರೆ ಮಾಡಲಿ. ಮೋದಿ, ಅಮಿತ್ ಶಾ ಇಬ್ಬರೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಯಾವಾಗ ಯಾವ ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆ ಮುಂದುವರಿಸಿಕೊಂಡು ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದರು. ಈ ರೀತಿಯ ಯೋಜನೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ರೈತರ ಸಮಾವೇಶ ಮಾಡ್ತೀನಿ. ಯಾವಾಗಲೇ ಚುನಾವಣೆ ಬರಲಿ ಕಾರ್ಯಕರ್ತರು ಸದಾ ಸಿದ್ಧವಾಗಿ ಇರಬೇಕು. ಹೀಗಾಗಿ ಸಮಾವೇಶ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು ಎಂದು ಸೂಚನೆ ಕೊಟ್ಟ ದೇವೇಗೌಡರು ಸೆಪ್ಟೆಂಬರ್‍ನಲ್ಲಿ ರೈತರ ಸಮಾವೇಶ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡಗಳ ಮೂರು ಸಮಾವೇಶ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.