ಕಾರವಾರ: 2015ರಲ್ಲಿ ಬೆಂಗಳೂರು ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳ ಮೂಲದ ಭಯೋತ್ಪಾದಕ ಅಫಾಕ್ ಲಂಕಾ ಪತ್ನಿ ಅರ್ಸಲ ಅಬೀರ್ ವೀಸಾವನ್ನು ಕೇಂದ್ರ ಗೃಹ ಇಲಾಖೆ ರದ್ದು ಪಡಿಸಿ, ಮರಳಿ ಪಾಕಿಸ್ತಾನಕ್ಕೆ ಕಳುಹಿಸಿದೆ.
ಒಂದು ತಿಂಗಳ ಹಿಂದೆಯೇ ಪಾಕಿಸ್ತಾನಕ್ಕೆ ತೆರಳುವಂತೆ ಅರ್ಸಲ ಅಬೀರ್ ಗೆ ನೋಟಿಸ್ ನೀಡಲಾಗಿತ್ತು. 2006ರಿಂದ ದೀರ್ಘ ಅವಧಿಯ ವೀಸಾ ಪಡೆದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂವರು ಮಕ್ಕಳೊಂದಿಗೆ ಅರ್ಸಲ ಅಬೀರ್ ವಾಸವಿದ್ದರು. ಅಪಕಾ ಲಂಕಾ ಪಾಕಿಸ್ತಾನ ಮೂಲದ ಅರ್ಸಲಳನ್ನು ದುಬೈನಲ್ಲಿ ಮದುವೆಯಾಗಿದ್ದನು. ನಂತರ ಪಾಕಿಸ್ತಾನದಲ್ಲಿ ಇಬ್ಬರೂ ಕೆಲವು ವರ್ಷ ನೆಲೆಸಿ ನಂತರ ಭಟ್ಕಳದ ಆಜಾದ್ ನಗರದಲ್ಲಿ ಅಫಾಕ್ ಲಂಕಾ ಯುನಾನಿ ವೈದ್ಯಕೀಯ ಚಿಕಿತ್ಸಾ ಕೇಂದ್ರ ತೆರೆದಿದ್ದನು. ಈ ವೇಳೆ ಬೆಂಗಳೂರಿನ ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.
Advertisement
Advertisement
ಈತನ ಪತ್ನಿ ಹಾಗೂ ಈತನ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅರ್ಸಲ ಅಬೀರ್‍ಳನ್ನು ಕೂಡ ತನಿಖೆ ನಡೆಸಲಾಗಿತ್ತು. ಇದೀಗ ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವೀಸಾವನ್ನು ರದ್ದು ಪಡಿಸಿದ್ದು, ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ.
Advertisement
Advertisement
ಚರ್ಚ್ ಸ್ಫೋಟ ಪ್ರಕರಣ:
ಬೆಂಗಳೂರು ನಗರದ ಹೃದಯ ಭಾಗವಾದ ಎಂ.ಜಿ.ರಸ್ತೆ ಬಳಿಯ ಚರ್ಚ್ ಸ್ಟ್ರೀಟ್‍ನಲ್ಲಿ ಡಿ.28ರ ರಾತ್ರಿ ಸುಮಾರು 8.30ರ ವೇಳೆಗೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ತಮಿಳುನಾಡು ಮೂಲದ ಭವಾನಿ(37) ಎಂಬ ಮಹಿಳೆ ಸಾವನ್ನಪ್ಪಿದ್ದರು. ವಿದ್ಯಾರ್ಥಿ ಕಾರ್ತಿಕ್(23), ಸಾಫ್ಟ್‍ವೇರ್ ಎಂಜಿನಿಯರ್, ರಾಜರಾಜೇಶ್ವರಿ ನಗರದ ನಿವಾಸಿ ಸಂದೀಪ್(30) ಮತ್ತು ಐಬಿಎಂ ಉದ್ಯೋಗಿ ವಿನಯ್(39) ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ದೂರು ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಸದ್ದಾಂ ಹುಸೇನ್ (35) ಹಾಗೂ ಸೈಯದ್ ಇಸ್ಮಾಯಿಲ್ ಅಫಾಕ್ (34) ಹಾಗೂ ಎಂಬಿಎ ವಿದ್ಯಾರ್ಥಿ ಅಬ್ದುಸ್ ಸುಬುರ್ (24) ಬಂಧಿಸಿದ್ದರು.