ಬೆಂಗಳೂರು: ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಕಡಿಮೆ ಸೀಟು ಪಡೆದ ಪಕ್ಷದಿಂದ ಸಿಎಂ ಆಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡೆ ಮಾಳವಿಕಾ ವ್ಯಂಗ್ಯವಾಡಿದ್ದಾರೆ.
ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 37 ಸೀಟು ಇಟ್ಟುಕೊಂಡು ಸಿಎಂ ಆಗಿದ್ದೆ ಬಹಳ ಆಶ್ಚರ್ಯದ ವಿಷಯ. ಇಷ್ಟು ಕಡಿಮೆ ಸೀಟು ಪಡೆದವರು ದೇಶದ ಯಾವುದೇ ರಾಜ್ಯದಲ್ಲಿ ಸಿಎಂ ಆಗಿಲ್ಲ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸ್ಥಿತಿ ಸಹ ಹಾಗೆ ಇತ್ತು, ಅಧಿಕಾರ ಬೇಕಿದ್ದರಿಂದ ಎಲ್ಲಾ ತ್ಯಾಗ ಮಾಡಿದರು. ಜೆಡಿಎಸ್ ಪಕ್ಷ ಹೇಳಿದ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಕಡಿಮೆ ಸೀಟು ಪಡೆದವರನ್ನು ಸಿಎಂ ಮಾಡಿದರು ಎಂದು ಹೇಳಿದರು.
ಸಿಎಂ ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. 18 ಶಾಸಕರು ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಸಂಖ್ಯಾ ಬಲ 100 ಕ್ಕೆ ಇಳಿದಿದೆ. ಬಿಜೆಪಿ ಸಂಖ್ಯಾ ಬಲ 107 ಇದೆ. ಸಹಜವಾಗಿ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡಬೇಕು. ಎಲ್ಲಾ ಸಚಿವರ ರಾಜೀನಾಮೆ ನೀಡಿದ ಮೇಲೆ ಸದನದಲ್ಲಿ ಹೇಗೆ ಚರ್ಚೆ ಮಾಡಬೇಕು. ಸದನದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು ಎಂದು ಪ್ರಶ್ನೆ ಮಾಡಿದರು.