ಬೆಂಗಳೂರು: ಬಹುಮತ ವಿಲ್ಲದೆ 14 ತಿಂಗಳು ಅಧಿಕಾರ ಮಾಡಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ವಿಶ್ವಾಸಮತದಲ್ಲಿ ಗೆಲುವು ಸಾಧಿಸಿರುವ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಪಕ್ಷ ಸರ್ಕಾರ ರಚನೆಮಾಡಲು ತುದಿಗಾಲಿನಲ್ಲಿ ನಿಂತಿದೆ.
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಕೇಂದ್ರ ಬಿಜೆಪಿ ಹೈಕಮಾಂಡ್ ಅವರ ಅನುಮತಿಗೆ ಕಾಯುತ್ತಿದ್ದ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನುಮತಿ ಸಿಕ್ಕಿದೆ. ಯಡಿಯೂರಪ್ಪ ಅವರು ಸಿಎಂ ಆಗಿ ಸರ್ಕಾರ ರಚನೆ ಮಾಡಲು ಕೇಂದ್ರ ಬಿಜೆಪಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಇದರ ಜೊತೆಗೆ ಕೆಲವು ಷರತ್ತು ವಿಧಿಸಿದೆ.
ಷರತ್ತುಗಳೇನು?
ಸದ್ಯಕ್ಕೆ ಯಡಿಯೂರಪ್ಪ ಅವರ ಜೊತೆ 23 ಜನ ಮಂತ್ರಿ ಆಗಿರುತ್ತಾರೆ. ಮೊದಲು ಯಡಿಯೂರಪ್ಪ ಮಾತ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿ. ಬಿಎಸ್‍ವೈ ಸಿಎಂ ಆದ ಬಳಿಕ ವಿಶ್ವಾಸಮತ ಮತ್ತು ಬಜೆಟ್ ಬಿಲ್ ಪಾಸಾಗಲಿ. ಅಲ್ಲಿಯ ತನಕವೂ ಮಂತ್ರಿಸ್ಥಾನ ತುಂಬುವುದು ಬೇಡವೇ ಬೇಡ. ಬುಧವಾರದ ಬಳಿಕ ಸಚಿವ ಸಂಪುಟ ರಚನೆಯಾಗಲಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಚಿವ ಸಂಪುಟದಲ್ಲಿ ಒಟ್ಟು 10 ಸಚಿವ ಸ್ಥಾನ ಖಾಲಿ ಬಿಟ್ಟುಕೊಳ್ಳಬೇಕು. 6 ತಿಂಗಳ ತನಕ ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಬೇಕು ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.