ಬೆಂಗಳೂರು: ಬಿಎಸ್‍ಪಿ ಪಕ್ಷದ ಶಾಸಕ ಎನ್ ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸ್ಪೀಕರ್ ಮತ್ತು ಮೈತ್ರಿ ನಾಯಕರನ್ನು ಕಾಲೆಳೆದಿದ್ದಾರೆ.
ಇಂದು ಟ್ವೀಟ್ ಮಾಡಿರುವ ಸಂತೋಷ್, ಬಿಎಸ್‍ಪಿ ಪಕ್ಷದ ಶಾಸಕ ಎನ್. ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಖ್ಯೆ ಕಡಿಮೆಯಾಗಿದೆ. ಸ್ಪೀಕರ್ ಮತ್ತು ಮೈತ್ರಿ ನಾಯಕರು ಈಗಲೂ ನಾಳೆ ಆಗೋದನ್ನು ಮುಂದೂಡಬಲ್ಲರೇ ಎಂದು ವ್ಯಂಗ್ಯವಾಡಿದ್ದಾರೆ.
BSP MLA Sri Mahesh declares that he will not attend floor test on 22 July in Karnataka Assembly … That brings the no down by one more .. Does crisis managers & Speaker still want to postpone the inevitable .??? @BJP4Karnataka @BSYBJP
— B L Santhosh (@blsanthosh) July 21, 2019
ಈ ಹಿಂದೆ ಯಾರಿಗೂ ಬೆಂಬಲ ನೀಡದಿರುವಂತೆ ಮಾಯಾವತಿ ಅವರು ಸೂಚಿಸಿದ್ದು, ಹೀಗಾಗಿ ಯಾವ ಪಕ್ಷಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ಎನ್ ಮಹೇಶ್ ಹೇಳಿದ್ದರು. ಇದಾದ ಬಳಿಕ ಸದನ ಆರಂಭವಾಗುವುದಕ್ಕೂ ಮುನ್ನಾದಿನ ಪ್ರತಿಕ್ರಿಯೆ ನೀಡಿ, ನಿಮ್ಮ ಇಷ್ಟ ಯಾರಿಗಾದರೂ ಬೆಂಬಲ ನೀಡಿ ಎಂದು ಮಾಯಾವತಿ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುತ್ತೇನೆ ಎಂದಿದ್ದರು.
ಈಗ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗುತ್ತದೆ ಎಂಬ ಕಾರಣಕ್ಕೆ ಹಿಂದೆ ಸರಿದಿರುವ ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದು, ಹೀಗಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಎರಡು ದಿನ ನನಗೆ ಖಾಸಗಿ ಕೆಲಸ ಇದ್ದಿದರಿಂದ ಹೀಗಾಗಿ ಸದನಕ್ಕೆ ಹೋಗಿರಲಿಲ್ಲ. ನಾಳೆಯೂ ಸಹ ಕ್ಷೇತ್ರದಲ್ಲಿ ಖಾಸಗಿ ಕೆಲಸವಿದ್ದು, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.