ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಸರ್ಕಾರ ಜಾರಿ ಮಾಡಲು ಹೊರಟಿರುವ ಕೆಸಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆಗಳನ್ನ ಕೈ ಬಿಡುವಂತೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆಯನ್ನ ವಿರೋಧಿಸಿ ಇಂದು ಬೆಳಗ್ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿವೆ. ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಯೋಜನೆ ಕೈಬಿಡುವಂತೆ ಅಗ್ರಹಿಸಿದರು.
Advertisement
Advertisement
ಬೆಂಗಳೂರಿನ ಹೆಬ್ಬಾಳ ಹಾಗೂ ನಾಗವಾರ ಕೆರೆಯ ನೀರನ್ನು ಸಂಸ್ಕರಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕರೆಗೆಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಿದೆ. ಆದ್ರೆ ಸಂಸ್ಕರಿಸಿದ ನೀರು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಆತಂಕ ಪ್ರತಿಭಟನಕಾರರನ್ನ ಕಾಡುತ್ತಿದೆ. ಕೊಳಚೆ ನೀರಿನಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳಿದ್ದು, ಈ ಕೊಳಚೆ ನೀರು ನಮಗೆ ಬೇಡ. ಹೀಗಾಗಿ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಎರಡು ಯೋಜನೆಗಳನ್ನ ಸರ್ಕಾರ ರದ್ದು ಮಾಡಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Advertisement
ಬಂದ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಘಟನೆಗಳ ಬಂದ್ ಗೆ ಶಾಸಕ ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ದುರದ್ದೇಶದಿಂದ ಬಂದ್ ನಡೆಸಲಾಗ್ತಿದೆ. ಬಂದ್ ಗೆ ಸಹಕರಿಸಬೇಡಿ ಅಂತ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸುಧಾಕರ್ ನೇತೃತ್ವದಲ್ಲಿ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.