ಬೆಂಗಳೂರು: ಇಂದು ದೇಶವ್ಯಾಪಿ ವಿವಿಧ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್ ಎಫೆಕ್ಟ್ ಕೆ.ಆರ್ ಮಾರ್ಕೆಟ್ ಮೇಲೆ ಬಿದ್ದಿದೆ. ಪ್ರತಿದಿನಕ್ಕಿಂತ ಕಡಿಮೆ ಮಟ್ಟದಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟವಾಗುತ್ತಿದ್ದು, ವ್ಯಾಪಾರ ಡಲ್ ಆಗಿದೆ.
ಬೆಳ್ಳಂಬೆಳಗ್ಗೆ 3 ಗಂಟೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದ ರೈತರು ಹಾಗೂ ವ್ಯಾಪಾರಿಗಳು ವ್ಯಾಪಾರ ಆರಂಭಿಸಿದ್ದಾರೆ. ಆದರೇ ಗ್ರಾಹಕರು ಬರುತ್ತಿಲ್ಲ, ಬೋಣಿಯೇ ಆಗಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಉಂಟಾಯಿತು. ಅಲ್ಲದೆ ಉಳಿದಿರುವ ಹೂವು ಮಾರಾಟ ಮಾಡಬೇಕು ಇಲ್ಲವೆಂದರೆ ನಾಳೆಗೆ ಇಡಬೇಕಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಬಂದ್‍ಗೆ ಕೆ.ಆರ್ ಮಾರ್ಕೆಟ್‍ನಲ್ಲಿ ಕರುನಾಡ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು. ಮಾರ್ಕೆಟ್‍ಗೆ ಬರುವ ಜನರಿಗೆ, ವಾಹನ ಸವಾರರಿಗೆ, ಗ್ರಾಹಕರಿಗೆ, ವ್ಯಾಪಾರಿಗಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ನೀಡಿದರು. ಬಂದ್ ಜನವಿರೋಧಿ ಸಾವಿರಾರು ಕೋಟಿ ನಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಕೆ.ಆರ್ ಮಾರ್ಕೆಟ್ ಜನಗಳಿಲ್ಲದೇ ಬೀಕೋ ಎನ್ನುತ್ತಿದೆ.