Connect with us

ಟೋಲ್ ವಿರೋಧಿಸಿ ಉಡುಪಿ ಬಂದ್ – ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ

ಟೋಲ್ ವಿರೋಧಿಸಿ ಉಡುಪಿ ಬಂದ್ – ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಗಲಾಟೆ ನಡೀತಿದೆ. ಮಂಗಳೂರು- ಉಡುಪಿ- ಕುಂದಾಪುರ ನಡುವೆ ಮೂರು ಟೋಲ್ ಗೇಟ್ ನಿರ್ಮಾಣ ಮಾಡಿದ್ದೇ ಈ ಹೋರಾಟಕ್ಕೆ ಕಾರಣವಾಗಿದೆ.

ಎರಡೂ ಟೋಲ್‍ಗಳ ಮೂಲಕ ಹೋಗಿ ಬರೋ ಎಲ್ಲಾ ವಾಹನಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಬಸ್ ಗಳು ಹೆದ್ದಾರಿಗೆ ಇಳಿದಿಲ್ಲ. ಪರಿಣಾಮ ಪ್ರಯಾಣಿಕರು ಉಡುಪಿ ಬಸ್ ನಿಲ್ದಣದಲ್ಲೇ ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದವರು ಕೂಡ ಪರದಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮಂಗಳೂರು, ಚಿಕ್ಕಮಗಳೂರು, ಕಾರವಾರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 6 ಇನ್ಸ್‍ಪೆಕ್ಟರ್, 35 ಎಸ್‍ಐ, 25 ಎಎಸ್‍ಐ, 5 ಕೆಎಸ್‍ಆರ್‍ಪಿ, 6 ಡಿಎಆರ್ ಪೊಲೀಸರು, 109 ಮಂದಿ ಹೋಮ್ ಗಾರ್ಡ್‍ಗಳನ್ನ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನೇಮಕ ಮಾಡಲಾಗಿದೆ. ಪಡುಬಿದ್ರೆ ಸಮೀಪದ ಹೆಜಮಾಡಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಕೆನರಾ ಬಸ್ ಮಾಲೀಕರ ಸಂಘ, ಟ್ಯಾಕ್ಸಿಮೆನ್ ಅಸೋಸಿಯೇಷನ್, ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘ- ಹೋಟೆಲ್ ಮತ್ತು ಬಾರ್ ಅಸೋಸಿಯೇಷನ್ ಇಂದು ಬಂದ್ ಮಾಡೋ ನಿರ್ಧಾರ ಮಾಡಿತ್ತು.

ಹೆಜಮಾಡಿ ಮತ್ತು ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಬಂದ್ ನ ಮುಂದಾಳತ್ವ ವಹಿಸಿದೆ. ಹೈವೇಯುದ್ದಕ್ಕೂ ಅಲ್ಲಲ್ಲಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಡುಪಿ ರಿಜಿಸ್ಟ್ರೇಷನ್ ನ ಕೆ.ಎ 20 ಎಲ್ಲಾ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋದು ಹೋರಾಟಗಾರರ ಉದ್ದೇಶ. ಆಂಧ್ರ ಮೂಲದ ನವಯುಗ ಕನ್‍ಸ್ಟ್ರಕ್ಷನ್‍ಗೆ ಹೈವೇ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಜಗನ್ಮೋಹನ್ ರೆಡ್ಡಿ ಜೈಲುವಾಸದಿಂದ ಮತ್ತು ಉಡುಪಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ನದಿ- ಉಪನದಿಗಳು ಹಾದು ಹೋಗೋದರಿಂದ ಕಾಮಗಾರಿ ವಿಳಂಬವಾಗಿದೆ.

ಇನ್ನು ಕೆಲವೆಡೆ ಸ್ಟೇ ಬಂದಿರೋದ್ರಿಂದ ಪಡುಬಿದ್ರೆ- ಕುಂದಾಪುರ ಭಾಗದಲ್ಲಿ ರಸ್ತೆಕಾಮಗಾರಿ ಪೂರ್ಣಗೊಂಡಿಲ್ಲ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಕಂಪನಿ ರಸ್ತೆ ಮಾಡಿರೋದ್ರಿಂದ ಬ್ಯಾಂಕ್ ಗೆ ಮರುಪಾವತಿ ಮಾಡಲು ಒತ್ತಡ ಬರುತ್ತಿದೆ ಅಂತ ಜಿಲ್ಲಾಡಳಿತಕ್ಕೆ ನವಯುಗ ಒತ್ತಡ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಂಕ ವಸೂಲಿಗೆ ಪರವಾನಿಗೆ ನೀಡಿದೆ. ಸೆಕ್ಷನ್ 144 ಹಾಕಿ ಹೋರಾಟ ನಡೆಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.

Advertisement
Advertisement