ಝೈದ್ ಖಾನ್ (Zaid Khan) ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಣಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ ಅಖಂಡ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ (Shakti Film Factory) ವಹಿಸಿಕೊಂಡಿದೆ.
ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕವೇ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನ (Tamil rights) ದಿಕ್ಕಿನಿಂದ ಈ ಶುಭ ಸಮಾಚಾರ ಜಾಹೀರಾಗಿದೆ. ಹೀಗೆ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ ಸುದ್ದಿ ಹೊರಬೀಳುತ್ತಲೇ, ಅಲ್ಲಿನ ಚಿತ್ರಪ್ರೇಮಿಗಳ ಚಿತ್ತ ತಾನೇತಾನಾಗಿ ಬನಾರಸ್ ನತ್ತ ವಾಲಿಕೊಂಡಿದೆ. ಯಾಕೆಂದರೆ, ಅತ್ಯಂತ ಅಚ್ಚುಕಟ್ಟಾಗಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ಹೆಸರುವಾಸಿಯಾಗಿದೆ. ಈ ಸಂಸ್ಥೆಯ ಕಡೆಯಿಂದ ತೆರೆಗಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ಟಾಗಿವೆ. ಈ ಕಾರಣದಿಂದಲೇ ಬನಾರಸ್ ಬಗೆಗಿನ ನಿರೀಕ್ಷೆ ತಮಿಳುನಾಡಿನಾದ್ಯಂತ ತಾರಕಕ್ಕೇರಿದೆ. ಇದನ್ನೂ ಓದಿ:ಮತ್ತೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ
ಜಯತೀರ್ಥ (Jayathirtha) ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಇವೆಲ್ಲವುಗಳ ಮೂಲಕವೇ ಬಹುನಿರೀಕ್ಷಿತ ಚಿತ್ರವೆಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ. ಜಯತೀರ್ಥ ಮಧುರವಾದ ಪ್ರೇಮಕಥಾನಕಗಳಿಗೆ, ಅಚ್ಚರಿದಾಯಕ ನಿರೂಪಣಾ ಶೈಲಿಗೆ ಹೆಸರಾಗಿರುವ ನಿರ್ದೇಶಕ. ಬನಾರಸ್ ಮೂಲಕ ಅವರು ಮತ್ತೊಂದು ಆಯಾಮದ ಕಥೆ ಹೇಳಹೊರಟಿರೋದು ಈಗಾಗಲೇ ಪಕ್ಕಾ ಆಗಿದೆ. ಇಷ್ಟೊಂದು ವಿಶೇಷತೆಗಳಿರೋದರಿಂದಲೇ ಪ್ರತಿಷ್ಠಿತ ಸಂಸ್ಥೆಗಳು ಪ್ರಶಂಶೆಯೊಂದಿಗೆ ಬನಾರಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಾಪುಗಾಲಿಡುತ್ತಿರುವ ಬನಾರಸ್, ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ತೆರೆಗಂಡು ಮ್ಯಾಜಿಕ್ ಮಾಡಲಿದೆ!