ಬನಾರಸ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ (Zaid Khan) ಹಾಗೂ ಈ ವರ್ಷದ ಮೊದಲ ಹಿಟ್ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ (Anil Kumar) ಕಾಂಬಿನೇಶನ್ ನಲ್ಲಿ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಈ ಚಿತ್ರಕ್ಕೆ ಕಲ್ಟ್ (Cult) ಎಂದು ಹೆಸರಿಡಲಾಗಿದೆ.
ಝೈದ್ ಖಾನ್ ನಟನೆಯ ಎರಡನೇ ಚಿತ್ರ ಇದಾಗಿದ್ದು, ಶೀರ್ಷಿಕೆ (Title) ಅರ್ಥದ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿಸಿದೆ. ಮೊನ್ನೆಯಷ್ಟೇ ಈ ಚಿತ್ರದ ಕುರಿತಂತೆ ಪೋಸ್ಟರ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಪೋಸ್ಟರ್ ನಲ್ಲೇ ಚಿತ್ರದ ಕುರಿತಂತೆ ಕುತೂಹಲ ಮೂಡಿಸಿತ್ತು.
ಇಂದು ಅನಾವರಣವಾಗಿರುವ ಟೈಟಲ್ ಪೋಸ್ಟರ್ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಶೀರ್ಷಿಕೆ ಮತ್ತು ಅದಕ್ಕೆ ಬಳಸಿರುವಂಥ ಫೋಟೋ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹೆಣ್ಣಿನ ಕಾಲುಗಳನ್ನು ಬಳಸಿಕೊಂಡು ಸಿಗರೇಟು ಸೇದುವಂತಹ ಕಲ್ಪನೆಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ.
ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.