ಕಾರವಾರ: ಹರಕೆ ತೀರಿಸಲು ಬಾಳೆಯ ತೆಪ್ಪದಲ್ಲಿ ಹುಟ್ಟಿದ ಮಗುವನ್ನು ತೇಲಿ ಬಿಡ್ತಾರಾ? ಈಗಲೂ ಈ ರೀತಿ ಆಚರಣೆ ಇದೆಯಾ ಎಂದು ಆಶ್ಚರ್ಯ ಆಗಬಹುದು. ಆದರೂ ಇದು ಸತ್ಯ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಇನ್ನೂ ಈ ರೀತಿಯ ಆಚರಣೆ ಜೀವಂತವಾಗಿದೆ.
ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿರುವ ಬಾಣಂತಿ ದೇವಿಯ ಬಳಿ ಹರಕೆ ಕಟ್ಟಿಕೊಳ್ಳುವ ಮೂಲಕ ಸಂತಾನ ಭಾಗ್ಯ ಪಡೆದ ಮಹಿಳೆಯರು ಬಾಣಂತಿ ಕೆರೆಯಲ್ಲಿ ತಮ್ಮ ಮಗುವನ್ನು ತೆಪ್ಪದಲ್ಲಿ ತೇಲಿಬಿಡುವ ಮೂಲಕ ದೇವಿಯ ಹರಕೆ ತೀರಿಸಿ ಪುನೀತರಾಗುತ್ತಾರೆ.
ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಿಂದ ಮೂರು ದಿನಗಳ ಕಾಲ ಸಾಲಗಾಂವ್ ಗ್ರಾಮದಲ್ಲಿ ಬಾಣಂತಿ ದೇವಿ ಜಾತ್ರೆ ನಡೆಸಲಾಗುತ್ತದೆ. ಈ ಜಾತ್ರೆ ವೇಳೆ ಮಕ್ಕಳಾಗದ ದಂಪತಿ ದೇವಿ ಬಳಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗೆ ಹರಕೆ ಕಟ್ಟಿಕೊಂಡ ದಂಪತಿಗಳಿಗೆ ಮಕ್ಕಳಾದರೇ ಈ ದೇವಸ್ಥಾನದ ಬಳಿ ಇರುವ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತಮಗೆ ಹುಟ್ಟಿದ ಮಗುವನ್ನು ತೇಲಿಬಿಟ್ಟು ಹರಕೆ ತೀರಿಸುವುದು ಪ್ರತೀತಿ.
ಹೀಗೆ ಪ್ರತಿ ವರ್ಷ ನೂರಾರು ಬಾಣಂತಿಯರು ತಮ್ಮ ಮಗುವನ್ನು ಈ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತೇಲಿ ಬಿಟ್ಟು ಸ್ನಾನ ಮಾಡಿಸಿ ಹರಕೆ ತೀರಿಸುತ್ತಾರೆ. ಬಹಳಷ್ಟು ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆದವರು ಸಹ ಇಲ್ಲಿ ಬಂದು ಹರಕೆ ಕಟ್ಟಿಕೊಂಡ ನಂತರ ಮಕ್ಕಳಾದ ಉದಾಹರಣೆ ಇದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.
ಈ ದೇವಿಯು ಬಾಣಂತಿ ದೇವಿ ಎಂದೇ ಪ್ರಸಿದ್ಧಿ ಹೊಂದಿದ್ದು, ಈ ಹಿಂದೆ ಪ್ರತಿ ವರ್ಷ ಸಂಕ್ರಾಂತಿ ದಿನದಿಂದ ಒಂದು ತಿಂಗಳು ಜಾತ್ರೆ ನಡೆಯುತಿತ್ತು. ಈ ಜಾತ್ರೆಯಲ್ಲಿ ತೆಪ್ಪೋತ್ಸವ, ಜಾನುವಾರುಗಳ ವ್ಯಾಪಾರ ತುಂಬಾ ಪ್ರಸಿದ್ಧಿಯಾಗಿತ್ತು. ಆದರೇ ಕಾಲ ಬದಲಾದಂತೆ ಆಚರಣೆ ಸಹ ಬದಲಾಗಿದ್ದು, ಈಗ ಈ ಜಾತ್ರೆ ಮೂರು ದಿನ ನಡೆಸಲಾಗುತ್ತಿದೆ. ಕೊನೆಯ ದಿನ ದೇವಿಯ ತೆಪ್ಪೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ.
ಇಂದೂ ಕೂಡ ನೂರಾರು ಬಾಣಂತಿಯರು ಬಾಣಂತಿ ದೇವಿಯ ಆರ್ಶಿರ್ವಾದ ಪಡೆದು ಪೂಜೆ ಸಲ್ಲಿಸಿದ್ದು, ವಿಜ್ರಂಭಣೆಯಿಂದ ಬಾಣಂತಿ ದೇವಿಯ ಹರಕೆ ಜಾತ್ರೆ ನೆರವೇರಿತು.