– ಸಾವಿರ ಲೀಟರಿಗೂ ಅಧಿಕ ಹಾಲು ಕೆರೆ ಪಾಲು
ರಾಮನಗರ: ಬಮೂಲ್(ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ) ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಣಾಮ ಅಧಿಕಾರಿಗಳು ರೈತರು ತಂದ ಹಾಲನ್ನು ಸ್ವೀಕರಿಸದೆ ದ್ವೇಷ ಸಾಧಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಗರ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಬಮೂಲ್ ಅಧಿಕಾರಿಗಳು ಡೈರಿಗೆ ಬಂದಿದ್ದಾಗ, ರೈತರು ಡೈರಿ ಕಾರ್ಯದರ್ಶಿ ಬಳಿ ಲೆಕ್ಕ ಪತ್ರದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಸರಿಯಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಅಧಿಕಾರಿಗಳು ಸಹ ಸರಿಯಾಗಿ ಸ್ಪಂದಿಸಿಲ್ಲ. ಆದರೆ ಕಳೆದ ಎರಡು ದಿನಗಳಿಂದ ರೈತು ಡೈರಿಗೆ ತಂದ ಹಾಲನ್ನು ಪಡೆದುಕೊಂಡು ನಂತರ ಸಾವಿರ ಲೀಟರ್‍ಗೂ ಹೆಚ್ಚು ಹಾಲನ್ನು ಕೆರೆಗೆ ಚೆಲ್ಲಿದ್ದಾರೆ. ಅಲ್ಲದೆ ಗ್ರಾಮದ ರೈತರ ಹಾಲು ಬೇಡವೇ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ರೈತರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒಟ್ಟಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹಾಲು ಪಡೆದು ಕೆರೆಗೆ ಚೆಲ್ಲಿರುವ ಬಗ್ಗೆ ಹಾಗೂ ಎರಡು ದಿನಗಳಿಂದ ಹಾಲನ್ನು ಹಾಕಿಸಿಕೊಳ್ಳದೇ ನಷ್ಟವನ್ನುಂಟು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.