ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ಪಾಕ್‍ನಲ್ಲಿ ಚೀನಾ ಇಂಜಿನಿಯರ್‌ಗಳ ಮೇಲೆ ಉಗ್ರರ ದಾಳಿ – ಸೈನಿಕರು ಸೇರಿ 13 ಸಾವು

Public TV
1 Min Read
TERRORIST

ಇಸ್ಲಾಮಾಬಾದ್: ಸ್ವಾತಂತ್ರ್ಯ ದಿನದ ಮುಂಚಿನ ದಿನವಾದ ಇಂದು ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ಚೀನಾದ (China) ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 4 ಚೀನಾ ಪ್ರಜೆಗಳು ಹಾಗೂ 9 ಪಾಕ್ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ವೇಳೆ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಕಂಪನಿಯೊಂದರ ಇಂಜಿನಿಯರ್‌ಗಳು ಪಾಕ್‍ನ ಗ್ವಾದರ್ ಬಳಿಯ ಫಕೀರ್ ಸೇತುವೆಯ ಬಳಿ ಕೆಲಸ ನಿರ್ವಹಿಸುವ ಸ್ಥಳಕ್ಕೆ ತೆರಳುವ ವೇಳೆ ಈ ದಾಳಿಯಾಗಿದೆ. ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಬಂದರು ನಗರವಾದ ಗ್ವಾದರ್‍ನಾದ್ಯಂತ ಸ್ಫೋಟಗಳು ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಬಂದರು ಹಾಗೂ ಪ್ರಮುಖ ಸ್ಥಳಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್, ಚೀನಾಗೆ ಠಕ್ಕರ್ ಕೊಡಲು ಅತ್ಯಾಧುನಿಕ ಡ್ರೋಣ್ ನಿಯೋಜನೆ

ಮುಂದಿನ ಆದೇಶದವರೆಗೆ ಬಲೂಚಿಸ್ತಾನ ಮತ್ತು ಸಿಂಧ್‍ನಲ್ಲಿರುವ ತನ್ನ ನಾಗರಿಕರು ತಮ್ಮ ನಿವಾಸಗಳಲ್ಲಿಯೇ ಇರುವಂತೆ ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿ ಆದೇಶ ಹೊರಡಿಸಿದೆ.

ಬಲೂಚ್ ಲಿಬರೇಶನ್ ಆರ್ಮಿ – ಮಜೀದ್ ಬ್ರಿಗೇಡ್ ಭಯೋತ್ಪಾದನಾ ಸಂಘಟನೆ ಇಂದಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ಣಿ ಸೇನೆ ಅಧ್ಯಕ್ಷನ ಮೇಲೆ ಗುಂಡು ಹಾರಿಸಿದ ಸಂಘಟನೆಯ ಮಾಜಿ ಸದಸ್ಯ

Web Stories

Share This Article