ಬಳ್ಳಾರಿ: ಬ್ಯಾನರ್ ಗಲಾಟೆ ಬಳಿಕ ತನಗೆ ಜೀವ ಬೆದರಿಕೆ ಇದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ಆರೋಪ ಮಾಡಿದ್ದಾರೆ. ನನಗೆ ಝಡ್ ಶ್ರೇಣಿಯ (Z Category Security) ಭದ್ರತೆ ಕೊಡಿ ಎಂದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ರೆಡ್ಡಿ ಪತ್ರ ಬರೆದಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹೀಗಾಗಿ, ಝಡ್ ಶ್ರೇಣಿಯ ಭದ್ರತೆ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಗೃಹಮಂತ್ರಿ ಪರಮೇಶ್ವರ್, ಡಿಜಿ & ಐಜಿ ಸಲೀಂ ಅವರಿಗೂ ಪ್ರತ್ಯೇಕ ಪತ್ರ ಬರೆದಿದ್ದಾರೆ.
ಜ.1 ರಂದು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಬೆಂಬಲಿಗರು ದಾಳಿ ನಡೆಸಿದ್ದರು. ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿ ಕಡೆಯಿಂದಲೇ ಪೆಟ್ರೋಲ್ ಬಾಂಬ್ ದಾಳಿ, ಬಂದೂಕಿನಿಂದ ಶೂಟ್ ಮಾಡಲು ಯತ್ನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಫೈರಿಂಗ್‌ಗೆ ‘ಕೈ’ ಕಾರ್ಯಕರ್ತ ಬಲಿ ಕೇಸ್ – ಸತೀಶ್ ರೆಡ್ಡಿಯ ಮೂವರು ಗನ್‌ಮ್ಯಾನ್‌ಗಳು ವಶಕ್ಕೆ
ಶಾಸಕ ಭರತ್ ರೆಡ್ಡಿ ಅವರಿಂದಲೇ ನನ್ನ, ನನ್ನ ಕುಟುಂಬಕ್ಕೆ ಆಪತ್ತು ಇದೆ. ಕೂಡಲೇ ಝಡ್ ಶ್ರೇಣಿಯ ಭದ್ರತೆ ಒದಗಿಸಿ, ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಜನಾರ್ದನ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮವೊಂದರ ಬ್ಯಾನರ್ ಅಳವಡಿಕೆ ವಿಚಾರವಾಗಿ ಜನಾರ್ದನ್ ರೆಡ್ಡಿ ಮನೆ ಬಳಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಫೈರಿಂಗ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ. ಇದನ್ನೂ ಓದಿ: ಬಳ್ಳಾರಿ ಗಲಾಟೆ ಕೇಸ್ ಸಿಐಡಿಗೆ ಕೊಡುವ ಯೋಚನೆ ಇದೆ: ಪರಮೇಶ್ವರ್

