ಬಳ್ಳಾರಿ: ಕುಡಿಯುವ ನೀರಿಗಾಗಿ ಒಳ್ಳೆ ಪಾಯಿಂಟ್ ನೋಡಿಸಿ ಬೋರ್ ವೆಲ್ ಹಾಕಿಸೋದನ್ನ ನಾವೆಲ್ಲಾ ನೋಡಿದ್ದೇವೆ. ಆದ್ರೆ ಇಲ್ಲಿನ ರೈತರು (Farmers), ತಮ್ಮ ಬೆಳೆಗಳನ್ನ ಉಳಿಸಿಕೊಳ್ಳಲು ನದಿಯ ತೀರದಲ್ಲೇ ಬೋರ್ ಹಾಕಿಸಿ, ನೀರು ಪಡೆಯಲು ಹರಸಾಹಸ ಪಡ್ತಿದ್ದಾರೆ. ಅರೇ.. ನದಿಯಲ್ಲಿ ಬೋರ್‌ವೆಲ್ ಹಾಕಿಸ್ತಿರೋದಾದ್ರೂ ಯಾಕೆ ಅಂತೀರಾ?
ಬಳ್ಳಾರಿ (Ballari) ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಹರಿಯುವ ಹಗರಿಯ ವೇದಾವತಿ ನದಿ ಬೇಸಿಗೆ ಆರಂಭದಲ್ಲೇ ಸಂಪೂರ್ಣ ಬತ್ತಿ ಬರಿದಾಗಿದೆ. ಇದೇ ವೇದಾವತಿ ನದಿಯ ನೀರನ್ನೇ ನಂಬಿ ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದ ನದಿ ಪಾತ್ರದ ಸಾವಿರಾರು ರೈತರು ಇದೀಗ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ನದಿಯ ಒಡಲಲ್ಲೇ ಗುಂಡಿ ತೋಡಿ, ಬೋರ್ ವೆಲ್ ಹಾಕಿಸಿ, ಬೆಳೆ ಉಳಿಸಿಕೊಳ್ಳಲು ರೈತರ ಹೆಣಗಾಡ್ತಿದ್ದಾರೆ.
ಇನ್ನೂ ಈ ವೇದಾವತಿ-ಹಗರಿ ನದಿ ನಂಬಿ ಕೃಷಿ ಮಾಡ್ತಿದ್ದ ಸಿರಗುಪ್ಪ ಹಾಗೂ ಬಳ್ಳಾರಿ ತಾಲೂಕಿನ 40 ಸಾವಿರಕ್ಕೂ ಅಧಿಕ ರೈತರು ಪಂಪ್ ಸೆಟ್ ಅಳವಡಿಕೆ ಮಾಡಿಕೊಂಡಿದ್ದಾರೆ. ಆದ್ರೆ ಇದೀಗ ನದಿಯಲ್ಲಿ ನೀರು ಬತ್ತಿರೋದ್ರಿಂದ ನದಿಯಲ್ಲೇ ಬೋರ್ ವೆಲ್ ಹಾಕಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಭತ್ತದ ಬೆಳೆ ತೆನೆ ಕಟ್ತಿದ್ದು ಒಂದೇ ನೀರು ತಪ್ಪಿದ್ರೆ ಅರ್ಧದಷ್ಟು ಇಳುವರಿ ಕಡಿಮೆ ಆಗುವ ಆತಂಕದಲ್ಲಿ ರೈತರಿದ್ದಾರೆ.
ಸದ್ಯ ನದಿಯಲ್ಲಿ ನೀರು ಬತ್ತಿರೋದ್ರಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕದ ಜೊತೆ ಜಲ-ಚರಗಳಿಗೂ ಸಂಕಷ್ಟ ಎದುರಾಗಿದೆ. ಬಿರು ಬಿಸಿಲಿನ ತಾಪಮಾನಕ್ಕೆ ಸಿಕ್ಕು ನದಿಯಲ್ಲಿ ನೀರಿಲ್ಲದೇ ಮೀನುಗಳು ಸತ್ತು ಬಿದ್ದಿವೆ. ಹೀಗಾಗಿ ರೈತರ ಮನವಿಯಂತೆ ಸರ್ಕಾರ ಎಚ್ಚೆತ್ತುಕೊಂಡು ಕಾಲುವೆ ಮೂಲಕ ನದಿಗೆ ನೀರು ಹರಿಸಿ, ರೈತರ ಬದುಕಿನ ಜೊತೆಗೆ ಜಲಚರಗಳನ್ನು ಬದುಕಿಸುವ ಕೆಲಸಕ್ಕೆ ಮುಂದಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.