ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರ್ತಾರೆ – ಜಮೀರ್ ಅಹ್ಮದ್
ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Sandur By Election) ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ (Annapurna Tukaram) ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಸಂಡೂರಿನ ಎಪಿಎಂಸಿಯಿಂದ ತಾಲೂಕು ಪಂಚಾಯತ್ ಕಚೇರಿವರೆಗೂ ಬೃಹತ್ ರೋಡ್ ಶೋ ಮಾಡುವ ಮೂಲಕ ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಶಕ್ತಿ ಪ್ರದರ್ಶನ ಮಾಡಿದರು. ರೋಡ್ ಶೋನಲ್ಲಿ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಸಚಿವ ಸಂತೋಷ ಲಾಡ್, ಮಾಜಿ ಸಚಿವ ನಾಗೇಂದ್ರ, ಸಂಸದ ಈ ತುಕಾರಾಂ, ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದರು.
Advertisement
Advertisement
ರೋಡ್ ಶೋ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಜೈ ಭೀಮ್ ಎಂದು ಮಾತು ಆರಂಭಿಸಿ, ಸಿಎಂ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ಜಾರಿ ಆಗಿರುವುದರಿಂದ ನಾವೆಲ್ಲ ಸುಭದ್ರವಾಗಿದ್ದೇವೆ. ಸೋಲಿಲ್ಲದ ಸರದಾರ ತುಕಾರಾಂ ನಾಲ್ಕು ಬಾರಿ ಗೆದ್ದಿದ್ದಾರೆ. ಸುಮ್ಮನೆ ಗೆಲ್ಲಿಸುತ್ತಾರಾ? ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಗೆಲ್ಲಿಸಿದ್ದೀರಿ. ತುಕಾರಂ ಈ ವರ್ಷದಲ್ಲಿ 1,615 ಕೋಟಿ ಅನುದಾನ ತಂದಿದ್ದಾರೆ. ಸಿಎಂ ಸೇರಿ 224 ಜನ ಯಾರೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಮಂತ್ರಿಯಾದರೂ ಪಿಯೂನ್ ರೀತಿ ಫೈಲ್ ಹಿಡಿದು ಟೇಬಲ್ ಟು ಟೇಬಲ್ ಓಡಾಡಿ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ: ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ: ಹೆಚ್‌ಡಿಡಿ
Advertisement
ತುಕಾರಾಂ ಬೇಕು ಅಂತ ರಾಜಿನಾಮೆ ನೀಡಿಲ್ಲ. ನಾವೇ ಒತ್ತಾಯ ಮಾಡಿ ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದೆವು. ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆ ತಂದಿಲ್ಲ. ಇಸ್ಲಾಂ ಧರ್ಮ ಯಾವತ್ತೂ ಜಾತಿ ಬೇಧ ಮಾಡಲ್ಲ. ಜನಾರ್ದನ ರೆಡ್ಡಿ ಅಪಪ್ರಚಾರ ಮಾಡುತ್ತಿದ್ದಾರೆ. ಬಳ್ಳಾರಿ ಪೂರ ಲೂಟಿ ಮಾಡಿದ್ದಾರೆ. ಅವರು ಈಗ ಜಿಲ್ಲೆಯಲ್ಲಿ ಏನೇನೋ ಮಾತಾಡಿ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಜಮೀರ್ ವಾಗ್ದಾಳಿ ನಡೆಸಿದರು.
Advertisement
ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, 2006 ರಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಡೂರಿನಲ್ಲಿ ಗಣಿಗಾರಿಕೆ ನಡೆಯುತ್ತಿತ್ತು.
20 ವರ್ಷಕ್ಕೆ 800 ಮಿಲಿಯನ್ ಟನ್ ಅದಿರು ರಫ್ತು ಆಗಿತ್ತು. ಇದರಲ್ಲಿ ಎರಡೇ ಪರ್ಸಂಟೇಜ್ ನಾನು ತೆಗೆದುಕೊಂಡಿದ್ದರೆ 1600 ಕೋಟಿ ನನ್ನ ಮನೆಯಲ್ಲಿ ಇರುತ್ತಿತ್ತು. ಆದರೆ ನಾನು ಬಡವರ ಹೊಟ್ಟೆ ಮೇಲೆ ಹೊಡಿಲಿಲ್ಲ, ಬ್ಲಾಕ್ ಮೇಲ್ ಮಾಡಿ ವಸೂಲಿ ಮಾಡಲಿಲ್ಲ. ತುಕಾರಾಂ ಕೂಡ 2008 ರಿಂದ ಅದೇ ರೀತಿ ಕೆಲಸ ಮಾಡಿದ್ದಾರೆ. ಅನ್ನಪೂರ್ಣ ಅವರು ನಮ್ಮ ಫ್ಯಾಮಿಲಿಯ ಸದಸ್ಯೆ, ಇದು ನನ್ನ ಮನೆಯ ಚುನಾವಣೆ. ಇದೊಂದು ಬಾರಿ ಆಶಿರ್ವಾದ ಮಾಡಿ, ಧರ್ಮವನ್ನು ರಾಜಕೀಯಕ್ಕೆ ತರುವುದಿಲ್ಲ. ನಮ್ಮ ಮನೆತನವೇ ಧರ್ಮದಿಂದ ಬಂದಿದೆ ಎಂದರು.
ರಾಜಕೀಯವಾಗಿ ನಾನು ಯಾರನ್ನೂ ಟೀಕೆ ಮಾಡಿಲ್ಲ. ನನ್ನ ಬಗ್ಗೆ ಸಾಕಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ಕೇಂದ್ರದ ಮಂತ್ರಿಗಳು, ರಾಜ್ಯದ ನಾಯಕರು ಬಂದು ಇಲ್ಲಿ ಸುಳ್ಳು ಹೇಳುತ್ತಿದ್ದಾರೆ. 60 ಸಾವಿರ ಕೋಟಿ ರೂ. ಸಿದ್ದರಾಮಯ್ಯ ಜನರ ಮನೆಗೆ ತಲುಪಿಸುತ್ತಿದ್ದಾರೆ. ಮೋದಿ ಸರ್ಕಾರ ಅದಾನಿ, ಅಂಬಾನಿ ಆದಾಯ ದ್ವಿಗುಣ ಮಾಡಿದ್ದಾರೆ. ಈ ಚುನಾವಣೆ ಕಾಂಗ್ರೆಸ್ ಪ್ರತಿಷ್ಠಿತ ಚುನಾವಣೆ. ಒಬ್ಬ ಹೆಣ್ಣು ಮಗಳಿಗೆ ಟಿಕೆಟ್ ಸಂಡೂರಿನ ಪ್ರತಿಷ್ಠೆಯ ಚುನಾವಣೆ. ಪ್ರತಿ ಮನೆಯ ಹೆಣ್ಣು ಮಗಳ ಗೆಲುವು ಆಗಬೇಕು ಎಂದು ಮನವಿ ಮಾಡಿದರು.