– ಪ್ರಧಾನಿಯನ್ನೇ ಟಾರ್ಗೆಟ್ ಮಾಡ್ತಿರುವಾಗ ನಾನು ಯಾವ ಲೆಕ್ಕ?: ಜನಾರ್ದನ ರೆಡ್ಡಿ
ಬಳ್ಳಾರಿ: ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ಸಂಬಂಧ ಬಳ್ಳಾರಿಯಲ್ಲಿ ನಡೆದ ಗಲಾಟೆ ರಕ್ತಸಿಕ್ತವಾಗಿ ಮಾರ್ಪಟ್ಟಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ನಿವಾಸದ ಬಳಿ ಫೈರಿಂಗ್.. ಕಲ್ಲು ತೂರಾಟ.. ಗಲಾಟೆ ನಡೆದಿದೆ. ರೆಡ್ಡಿ ನಿವಾಸದ ಬಳಿ ನಡೆದ ಫೈರಿಂಗ್‌ನಲ್ಲಿ ಶಾಸಕ ಭರತ್ ರೆಡ್ಡಿ ಬೆಂಬಲಿಗ ರಾಜಶೇಖರ್ ಬಲಿ ಆಗಿದ್ದಾನೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಿಂದ ಎದ್ದ ಕಿಚ್ಚು ಇದೀಗ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಮೂಲಕ ತಾರಕಕ್ಕೇರಿದೆ. ರಾಜಶೇಖರ್ ದೇಹ ಹೊಕ್ಕಿದ ಗುಂಡು ಯಾರದ್ದು ಎಂಬ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ರಾಜಶೇಖರ್ ದೇಹ ಹೊಕ್ಕಿದ ಗುಂಡು ಪೊಲೀಸರದ್ದಲ್ಲ
ಕಾಂಗ್ರೆಸ್ ಕಾರ್ಯಕರ್ತ (Congress Worker) ರಾಜಶೇಖರ್ ದೇಹ ಹೊಕ್ಕಿದ್ದ ಗುಂಡು ಪೊಲೀಸ್ ಇಲಾಖೆಯದ್ದಲ್ಲ. ಇದು ಖಾಸಗಿ ವ್ಯಕ್ತಿಯ ರಿವಾಲ್ವರ್‌ನಿಂದ ಹಾರಿದ ಬುಲೆಟ್ ಎಂದು ಘಟನಾ ಸ್ಥಳದ ಉಸ್ತುವಾರಿವಹಿಸಿರುವ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಸ್ಪಷ್ಟನೆ ಕೊಟ್ಟಿದ್ದಾರೆ. ನಿನ್ನೆ ಫೈರಿಂಗ್ ಬಳಿಕ ರಾಜಶೇಖರ್ ಸಾವಾಗಿದೆ. ಪೊಲೀಸರಿಂದ ನಡೆದ ಫೈರಿಂಗ್‌ನಲ್ಲಿ ಹಾರಿದ ಗುಂಡು ಇದಲ್ಲ. ಅದು ಯಾರ ಗನ್‌ನ ಬುಲೆಟ್ ಎಂಬ ಬಗ್ಗೆ ತನಿಖೆ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ನಿವಾಸದ ಕಡೆ ಗುಂಡಿನ ದಾಳಿ ನಡೆಸಿದ ಸತೀಶ್ ರೆಡ್ಡಿ ಗನ್ ಮ್ಯಾನ್ – ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಪ್ರಕರಣಕ್ಕೆ ರಾಜಕೀಯ ಬಣ್ಣ ಆರೋಪ
ಇನ್ನು ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ (Bharath Reddy) ಬೆಂಬಲಿಗ ಸತೀಶ್ ರೆಡ್ಡಿ ಹಾರಿಸಿದ ಗುಂಡೇ ಕಾರಣ ಅಂತ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ರೆಡ್ಡಿ ಟಾರ್ಗೆಟ್ ಮಾಡಿಕೊಂಡೇ ಈ ದಾಳಿ ನಡೆಸಲಾಗಿದೆ ಅಂತ ರಾಮುಲು ದೂರಿದ್ದಾರೆ. ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕೂಡ ನನ್ನ ತಮ್ಮನಿಗೆ ಬುಲೆಟ್ ಬಿದ್ದಿದ್ದರೆ ಏನ್ ಮಾಡ್ಬೇಕಿತ್ತು? ನಾವೇ ಫೈರಿಂಗ್ ಮಾಡಿ ನಾವೇ ಬುಲೆಟ್ ತೋರಿಸ್ತೀವಾ? ಬೇಕಂತಲೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ. ರಾಜಶೇಖರ್ ಸಾವಿಗೆ ನಾವು ಕಾರಣರಲ್ಲ. ಗುಂಡೇಟೇ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಅಂತ ಆಗ್ರಹಿಸಿದ್ದಾರೆ.
ರೆಡ್ಡಿ & ಟೀಂ ವಿರುದ್ಧ ಎಫ್‌ಐಆರ್
ಇನ್ನು, ರೆಡ್ಡಿ ನಿವಾಸದ ಬಳಿ ಫೈರಿಂಗ್ ಪ್ರಕರಣ (Ballari Firing Case) ಸಂಬಂಧ ಬಳ್ಳಾರಿ ಬ್ರೂಸ್‌ಫೇಟೆ ಪೊಲೀಸ್ ಠಾಣೆಯಲ್ಲಿ 11 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್, ದಿವಾಕರ್, ಮಾರುತಿ ಪ್ರಸಾದ್ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ.
ಪ್ರಧಾನಿಯನ್ನೇ ಟಾರ್ಗೆಟ್ ಮಾಡ್ತಾರೆ, ನಾನು ಯಾವ ಲೆಕ್ಕ?
ಜನಾರ್ದನ ರೆಡ್ಡಿ ಆಪ್ತರು ಸಹ ಭರತ್ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಜನಾರ್ದನ ರೆಡ್ಡಿ 2 ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಿನ್ನೆ ಅಧಿಕಾರ ಸ್ವೀಕಾರ, ಇಂದು ತಲೆದಂಡ – ಬಳ್ಳಾರಿ ಎಸ್‌ಪಿ ಅಮಾನತು
ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. 7-8 ಬಾರಿ ಫೈರಿಂಗ್ ಆಗಿದೆ. ನಿನ್ನೆ ಒಂದು ಗುಂಡು ಪತ್ತೆಯಾಗಿತ್ತು, ಇಂದು ಮತ್ತೊಂದು ಬುಲೆಟ್ ಕ್ಯಾಪ್ ಪತ್ತೆಯಾಗಿದೆ. ಜಾತಿ ನಿಂದನೆ, ಕೊಲೆ ಯತ್ನ ಆರೋಪದ ಅಡಿಯಲ್ಲಿ 15 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕ್ರಿಮಿನಲ್‌ಗಳಿಗೆ ಬೇರೆನು ಕೆಲಸ? ದೇಶದ ಪ್ರಧಾನ ಮಂತ್ರಿಯನ್ನೇ ಟಾರ್ಗೆಟ್ ಮಾಡ್ತಾರೆ ಅಂದ್ಮೇಲೆ ನನ್ನಂಥವರು ಯಾವ ಲೆಕ್ಕ ಅವರಿಗೆ ಅಂತ ಪ್ರಶ್ನೆ ಮಾಡಿದ್ದಾರೆ.
ರಾಕ್ಷಸರ ಅಟ್ಟಹಾಸ ಮಟ್ಟ ಹಾಕುತ್ತೇವೆ; ಭರತ್ ರೆಡ್ಡಿ ಗುಡುಗು
ಇನ್ನೂ ರೆಡ್ಡಿ & ಟೀಂ ವಿರುದ್ಧ ಶಾಸಕ ಭರತ್ ರೆಡ್ಡಿ ಗುಡುಗಿದ್ರು. ರೆಡ್ಡಿ ಬ್ರದರ್ಸ್ ಅನ್ನು ರಾಕ್ಷಸರಿಗೆ ಹೋಲಿಸಿದ್ರು. ಬಳ್ಳಾರಿಯಲ್ಲಿ ರಾಕ್ಷಸರ ಅಟ್ಟಹಾಸ ಮಟ್ಟ ಹಾಕುತ್ತೇನೆ. ನಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ಒದಗಿಸಬೇಕಾಗಿದೆ. ಹೀಗಾಗಿ ನಾಳೆ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡೇ ಮಾಡ್ತೀವಿ ಅಂದರು. ಇನ್ನು ರಾಜಶೇಖರ್‌ಗೆ ತಗುಲಿದ ಗುಂಡಿನ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನಿನ ಮೇಲೆ ನಂಬಿಕೆ ಇದೆ ಎಂದ್ರು. ಇದನ್ನೂ ಓದಿ: ಅಟ್ರಾಸಿಟಿ ಸೇರಿದಂತೆ ರೆಡ್ಡಿ ಮೇಲೆ 4 ಕೇಸ್ – ಎಲ್ಲದರಲ್ಲೂ A1 ಆರೋಪಿ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ನನ್ನ ಪತಿ ಬಿಜೆಪಿಯಲ್ಲಿದ್ದು. ನನ್ನ ಮಗ ಕಾಂಗ್ರೆಸ್‌ನ ಭರತ್ ರೆಡ್ಡಿ ಜೊತೆ ಓಡಾಡುತ್ತಿದ್ದು, ರಾಜಕೀಯ ಕಾರಣಕ್ಕೆ ನನ್ನ ಮಗ ಹತ್ಯೆ ನಡೆದಿದೆ ಎಂದು ರಾಜಶೇಖರ್ ತಾಯಿ ತುಳಸಿ ಕಣ್ಣೀರು ಹಾಕಿದ್ರು. 4-5 ವರ್ಷಗಳಿಂದ ನನ್ನ ತಮ್ಮ ಕಾಂಗ್ರೆಸ್‌ನಲ್ಲಿದ್ದ. ಆತನಿಗೆ ಮದ್ವೆ ಆಗಿಲ್ಲ, ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಎಂದು ಸಹೋದರ ಈಶ್ವರ ರೆಡ್ಡಿ ಹೇಳಿದ್ರು.
ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಗೂ ಗಾಯ
ನಿನ್ನೆ ನಡೆದ ಜನಾರ್ದನ ರೆಡ್ಡಿ ಮನೆ ಬಳಿ ಇಬ್ಬರು ಬೆಂಬಲಿಗರಿಂದ ಕಲ್ಲು ತೂರಾಟ ನಡೆಸಲಾಯ್ತು. ಗಲಾಟೆ ಜೋರಾಗುತ್ತಿದ್ದಂತೆ ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿ ಖಾಸಗಿ ಗನ್ ಮ್ಯಾನ್‌ಗಳು ಏರ್ ಫೈರ್ ಮಾಡಿದ್ರು. ಈ ವೇಳೆ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿಗೂ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸತೀಶ್ ರೆಡ್ಡಿಯನ್ನ ರವಾನಿಸಲಾಗಿದೆ.



