ಬೆಂಗಳೂರು: ಘಟನೆ ನಡೆದ ಸ್ಥಳದಲ್ಲಿ ಇರದೇ ಇದ್ದಿದ್ದರಿಂದ ಬಳ್ಳಾರಿ ಎಸ್ಪಿಯನ್ನ (Ballari SP) ಅಮಾನತು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಬಳ್ಳಾರಿ ಗಲಾಟೆ (Ballari Clash) ಪ್ರಕರಣ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಗಳಿಗೆಲ್ಲ ನಾನು ಉತ್ತರ ಕೊಡಲ್ಲ. ಘಟನೆ ಸಂಬಂಧ ಈಗಾಗಲೇ ಎಸ್ಪಿಯನ್ನ ಅಮಾನತು ಮಾಡಿದ್ದೇನೆ. ಘಟನಾ ಸ್ಥಳದಲ್ಲಿ ಅವರು ಇರಲಿಲ್ಲ. ಆದ್ದರಿಂದ ಅಮಾನತು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಅವಲೋಕನಕ್ಕೆ ಬಳ್ಳಾರಿಗೆ ಕಾಂಗ್ರೆಸ್ ನಿಯೋಗ
ಇನ್ನೂ ಬಳ್ಳಾರಿಯ ಘರ್ಷಣೆ ವೇಳೆ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ (Congress Worker) ಬಲಿಯಾಗಿದ್ದಾನೆ. ಹೀಗಾಗಿ ಬಳ್ಳಾರಿಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕಿಸಲು ಕಾಂಗ್ರೆಸ್ ಪಕ್ಷದ ನಿಯೋಗವನ್ನ ಕಳುಹಿಸಲು ಮುಂದಾಗಿದೆ.
ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಮೂರ್ತಿ, ಕುಮಾರ್ ನಾಯಕ್, ಜಕ್ಕಪ್ಪನವರ್ ಹಾಗೂ ಬಸನಗೌಡ ಬಾದರ್ಲಿ ಅವರನ್ನೊಳಗೊಂಡ 6 ಮಂದಿ ನಿಯೋಗವನ್ನ ಡಿಸಿಎಂ ಡಿಕೆ ಶಿವಕುಮಾರ್ ಅವರು ರಚಿಸಿದ್ದು, ಬಳ್ಳಾರಿಗೆ ಕಳಿಸಿಕೊಡಲಿದ್ದಾರೆ.
ಬಳ್ಳಾರಿಯಲ್ಲಿ ಗಲಾಟೆ… ಗುಂಡೇಟು…!
ಬಳ್ಳಾರಿ ಹಿಂದೆಂದೂ ಆಗದ ಗಲಭೆಗೆ ಸಾಕ್ಷಿಯಾಗಿದೆ. ಶನಿವಾರ (ಜ.3) ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ರಕ್ತ ಹರಿದಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಬಳಿ ಫೈರಿಂಗ್, ಕಲ್ಲುತೂರಾಟ ನಡೆದಿದ್ದು, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದಾನೆ. ಬ್ಯಾನರ್ ಗಲಾಟೆಯಿಂದ ಎದ್ದ ಕಿಚ್ಚು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಮೂಲಕ ಧಗಧಗಿಸಿ ತಾರಕಕ್ಕೇರಿದೆ. ರಾಜಶೇಖರ್ ದೇಹ ಹೊಕ್ಕಿದ ಗುಂಡು ಯಾರದ್ದು ಎಂಬ ಪ್ರಶ್ನೆ ಇದೀಗ ನಿಗೂಢವಾಗಿದೆ.
ಅಸಲಿಗೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್‌ನ ಗುಂಡು ಎಂದು ವಿಪಕ್ಷಗಳು ಆರೋಪಿಸ್ತಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ. ಘಟನೆ ಬಳಿಕ ಹೆಚ್ಚುವರಿ ಕಾರ್ಯ ನಿರ್ವಹಣೆಗಾಗಿ ನಿಯೋಜನೆಗೊಂಡಿದ್ದ ಚಿತ್ರದುರ್ಗ ಎಸ್‌ಪಿ ರಂಜಿತ್ ಬಂಡಾರು ಪ್ರತಿಕ್ರಿಯಿಸಿ, ದೇಹ ಹೊಕ್ಕಿದ್ದ ಗುಂಡು ಪೊಲೀಸ್ ಇಲಾಖೆಯದ್ದಲ್ಲ. ಇದು ಖಾಸಗಿ ವ್ಯಕ್ತಿಯ ರಿವಾಲ್ವರ್‌ನಿಂದ ಹಾರಿದ ಬುಲೆಟ್ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ಭರತ್ ರೆಡ್ಡಿ ಕಡೆಯವರಿಂದಲೇ ಗುಂಡು ಹಾರಿದೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ಇತ್ತ, ಸೋಮಶೇಖರ್ ರೆಡ್ಡಿ ಕೂಡ ನನ್ನ ತಮ್ಮನಿಗೆ ಬುಲೆಟ್ ಬಿದ್ದಿದ್ದರೆ ಏನ್ ಮಾಡ್ಬೇಕಿತ್ತು. ನಾವೇ ಫೈರಿಂಗ್ ಮಾಡಿ ನಾವೇ ಬುಲೆಟ್ ತೋರಿಸ್ತೀವಾ..? ಬೇಕಂತಲೇ ಕಲ್ಲು ತೂರಾಟ ನಡೆಸಿದ್ದಾರೆ ಎಂದಿದ್ದಾರೆ. ಈ ಮಧ್ಯೆ, ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ 11 ಜನರ ಮೇಲೆ ಕೇಸ್ ದಾಖಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಲಿಖಾನ್ ಸೇರಿದಂತೆ 11 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೊಲೆ ಯತ್ನ, ಬ್ಯಾನರ್ ಹರಿದ ಪ್ರಕರಣ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೃತ ರಾಜಶೇಖರ್ ಸಹೋದರ ಕೊಟ್ಟ ದೂರಲ್ಲೂ ಜನಾರ್ದನ ರೆಡ್ಡಿಯೇ ಪ್ರಮುಖ ಆರೋಪಿ ಆಗಿದ್ದಾರೆ.
ಗನ್‌ಗಳು FSL ಗೆ ರವಾನೆ
ಇನ್ನೂ, ಗನ್‌ಮ್ಯಾನ್‌ಗಳಿಂದ 5 ಗನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲವನ್ನೂ ಎಫ್‌ಎಸ್‌ಎಲ್‌ಗೆ ರವಾನಿಸಿದ್ಧಾರೆ. ಯಾವ ಬುಲೆಟ್ ಮ್ಯಾಚ್ ಆಗುತ್ತೆ ಅವರ ವಿರುದ್ಧ ಕ್ರಮ ಅಂತ ಎಡಿಜಿಪಿ ಹಿತೇಂದ್ರ ಹೇಳಿಕೆ ನೀಡಿದ್ದಾರೆ. ಇತ್ತ ಸರ್ಕಾರ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವ್ರನ್ನ ಅಮಾನತು ಮಾಡಿದೆ. ನಿನ್ನೆ ಮಧ್ಯಾಹ್ನವಷ್ಟೇ ಚಾರ್ಜ್ ತೆಗೆದುಕೊಂಡಿದ್ದರು. ಘಟನೆಯನ್ನ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಅಂತಾ ಚಾರ್ಜ್ ತೆಗೆದುಕೊಂಡ 24 ಗಂಟೆಯಲ್ಲೇ ತಲೆದಂಡವಾಗಿದೆ.

