– ಆರೋಪಿಗಳಿಗೆ ಜ.19ರವರೆಗೆ ನ್ಯಾಯಾಂಗ ಬಂಧನ
ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ (Janardhan Reddy) ನಿವಾಸದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ಐದು ದಿನಗಳ ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಸೋಕೋ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಘಟನೆಯ ತನಿಖೆಯ ಭಾಗವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕ ವಿಶೇಷ ತಂಡಗಳು ಬಳ್ಳಾರಿಗೆ ಆಗಮಿಸಿದ್ದು, ಫೈರಿಂಗ್ ನಡೆದ ಸ್ಥಳದ ಜೊತೆಗೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಜನಾರ್ದನ ರೆಡ್ಡಿ ನಿವಾಸದ ಸುತ್ತಮುತ್ತಲ ಪ್ರದೇಶದಲ್ಲಿ ಪರಿಶೀಲನೆ ವೇಳೆ ಬಾಂಬ್ ನಿಷ್ಕ್ರಿಯ ದಳ ಮತ್ತೊಂದು ಬುಲೆಟ್ ಪತ್ತೆ ಹಚ್ಚಿದೆ. 9 ಎಂಎಂ ಬುಲೆಟ್ ಪತ್ತೆಯಾಗಿದೆ. ಬುಲೆಟ್ ಪತ್ತೆ ಹಚ್ಚುವ ಮಷಿನ್ ಮೂಲಕ ಬುಲೆಟ್ ಪತ್ತೆ ಮಾಡಲಾಗಿದೆ. ಬುಲೆಟ್ ಸಿಕ್ಕ ಜಾಗವನ್ನು ಮಾರ್ಕ್ ಮಾಡಿ ಬುಲೆಟ್‌ನ ಫೋಟೋ ಚಿತ್ರೀಕರಣ ಮಾಡಲಾಗಿದೆ. ಬುಲೆಟ್ ಪತ್ತೆಯಾದ ಸ್ಥಳ ಹಾಗೂ ರಸ್ತೆಗಿರುವ ಬ್ಯಾರಿಕೇಡ್‌ನಿಂದ ಅಧಿಕಾರಿಗಳು ಅಳತೆ ಮಾಡಿದ್ದಾರೆ. ಬುಲೆಟ್ ಎಷ್ಟು ದೂರದಿಂದ ಹಾರಿದೆ ಅಂತಾ ತನಿಖೆ ನಡೆಸಿದ್ದಾರೆ. ಸದ್ಯ ಸಿಕ್ಕಿರುವ ಬುಲೆಟ್ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಜ.11ರಂದು ಸೋಮನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ
ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯ ಜನಾರ್ಧನರೆಡ್ಡಿ ಮನೆ ಮುಂದೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಒಂದೊಂದೇ ವಿಷಯಗಳು ಇದೀಗ ಬಯಲಿಗೆ ಬರ್ತಿದ್ದು, ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ. ಕಾಂಗ್ರೆಸ್ ಕಡೆಯವರೇ ಎಲ್ಲ ಮಾಡಿದ್ದು ಎನ್ನುವ ಜನಾರ್ದನ ರೆಡ್ಡಿ ಅವರ ಬೆಂಬಲಿಗರೂ ಕೂಡಾ ಗಲಾಟೆಯಲ್ಲಿ ರಾಶಿ ರಾಶಿ ದೊಣ್ಣೆಗಳ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: US ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮನೆ ಮೇಲೆ ಗುಂಡಿನ ದಾಳಿ – ಶಂಕಿತ ಅರೆಸ್ಟ್
ಘಟನೆ ಪೂರ್ವ ನಿಯೋಜಿತ ಕೃತ್ಯ ಅನ್ನೋದಕ್ಕೆ ಈ ದೃಶ್ಯಗಳು ಸ್ಪಷ್ಟ ನಿದರ್ಶನವಾಗಿದ್ದು, ದೊಣ್ಣೆ ಹಿಡಿದು ರೆಡ್ಡಿ ಬೆಂಬಲಿಗರೂ ಹೊಡೆದಾಡಿದ್ದಾರೆ. ಎರಡೂ ಕಡೆಯವರು ಮುಂಚಿತವಾಗಿಯೇ ಕಲ್ಲು ದೊಣ್ಣೆಗಳನ್ನ ಸಂಗ್ರಹಿಸಿಟ್ಟಿದ್ದರು. ಆಗ ಎರಡೂ ಕಡೆಯವರು ಕಲ್ಲು, ಕಟ್ಟಿಗೆ ತಂದು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದ ಬಳಿಕ ರೆಡ್ಡಿ ಮನೆ ಕಾಂಪೌಂಡ್‌ನಲ್ಲಿ ದೊಣ್ಣೆ ಇಟ್ಟು, ರೆಡ್ಡಿ ಬೆಂಬಲಿಗರು ತೆರಳಿದ್ದರು. ಇಲ್ಲಿ ಕೇವಲ ಭರತ್ ರೆಡ್ಡಿ ಬೆಂಬಲಿಗರು ಮಾತ್ರವಲ್ಲದೇ ಜನಾರ್ದನ ರೆಡ್ಡಿ ಬೆಂಬಲಿಗರಿಂದಲೂ ಹಲ್ಲೆ ನಡೆದಿದೆ. ಇದು ಎರಡೂ ಕಡೆಯಿಂದಲೂ ಪೂರ್ವ ನಿಯೋಜಿತ ಕೃತ್ಯ ಅನ್ನೋದು ಈ ಮೂಲಕ ಕನ್ಫರ್ಮ್ ಆಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಯೋಗಿ – ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ
ಬಳ್ಳಾರಿ ಗಲಾಟೆ ಸಂಬಂಧ ಸಿಐಡಿ ತನಿಖೆ ವಹಿಸುವ ಬಗ್ಗೆ ನಾಳೆ ಪರಮೇಶ್ವರ್ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈಗ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ಪೊಲೀಸರ ಕಾರ್ಯದಕ್ಷತೆ ಬಗ್ಗೆ ನಮಗೆ ಅನುಮಾನಗಳಿಲ್ಲ. ಈ ಘಟನೆ ತನಿಖೆ ಮಾಡುವಲ್ಲಿ ಅವರು ನಿಪುಣರಿದ್ದಾರೆ ಎಂದಿದ್ದಾರೆ. ಜೊತೆಗೆ ಪೊಲೀಸರು ತನಿಖೆ ಮಾಡಿ ವರದಿ ಕೊಡಲಿ. ಆ ನಂತರ ಬೇರೆ ತೀರ್ಮಾನ ಮಾಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ ಬಿಡುಗಡೆ ಭಾಗ್ಯ – 15ನೇ ಬಾರಿಗೆ 40 ದಿನ ಪೆರೋಲ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ದೊಂಬಿ ಪ್ರಕರಣದ ಸಂಪೂರ್ಣ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ರಾಜಕೀಯ ಲಾಭಕ್ಕಾಗಿ ಘಟನೆಯನ್ನ ಇನ್ನಷ್ಟು ತೀವ್ರವಾಗಿ ಖಂಡಿಸಲು ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ಘಟನೆ ನಡೆದಾಗಿನಿಂದ ಹಲವು ರಾಜ್ಯ ನಾಯಕರು ಜನಾರ್ದನ ರೆಡ್ಡಿ ಮನೆಗೆ ಬಂದು ಹೊಗಿದ್ದಾರೆ. ಇವತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ರೆಡ್ಡಿ ಮನೆಗೆ ಭೇಟಿ ನೀಡಿದ್ದಾರೆ. ಸದ್ಯ ಘಟನೆಯಿಂದ ಮುಜುಗರಕ್ಕೀಡಾಗಿರುವ ಕಾಂಗ್ರೆಸ್ ಸೈಲೆಂಟ್ ಆಗಿದೆ. ಇದನ್ನೇ ಲಾಭವನ್ನಾಗಿಸಿಕೊಂಡಿರೋ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಬಳ್ಳಾರಿಯಲ್ಲಿ ಶಾಸಕರ ಮೇಲೆ ಶಾಸಕನೇ ಹೋಗಿ ಗೂಂಡಾಗಿರಿ ಮಾಡಿದ್ದಾರೆ. ಪೊಲೀಸರೇ ಅವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಜಮೀರ್ ಅವರಿಗೆ ಬಿರಿಯಾನಿ ಕೊಡ್ಸಿ ಬಂದಿದ್ದಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಆರ್ ಅಶೋಕ್ ಮಾತನಾಡಿ ರೆಡ್ಡಿ, ಶ್ರೀರಾಮುಲುಗೆ ಪ್ರಾಣಾಪಾಯ ಇದೆ. ಇಬ್ಬರಿಗೂ ಸರ್ಕಾರ ಝೆಡ್ ಶ್ರೇಣಿಯ ಭದ್ರತೆ ಕೊಡಲೇಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ದೀರ್ಘಾವಧಿ ಸಿಎಂ – ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಸಿಎಂ
ಇನ್ನು ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲಾ ಆರೋಪಿಗಳನ್ನ ಬೆಂಗಳೂರಿಗೆ ಕರೆದೊಯ್ದ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕಾಂಗ್ರೆಸ್‌ನ 10 ಆರೋಪಿಗಳು, ಬಿಜೆಪಿಯ 16 ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಮುಕ್ಕಣ್ಣ, ಕಾರ್ತಿಕ್, ಇನಾಯತುಲ್ಲಾ, ರಾಜು, ಮುಸ್ತಫಾ, ಶ್ರೀಕಾಂತ್, ಮಹಮ್ಮದ್, ವೆಂಕಟೇಶ್, ಮುಬಾಷ, ಗುರುಪ್ರಸಾದ್, ವಸುಂಧರ, ಶಿವಕುಮಾರ್, ಸಚಿನ್, ಅಬ್ದುಲ್ ರಜಾಕ್, ಬಜ್ಜಯ್ಯ, ಎಂ ತಿಮ್ಮಪ್ಪ, ಗುಂಡಾಲಿ ಶ್ರೀನಿವಾಸ, ಕೆಬಿ ಲಕ್ಷ್ಮಣ, ಪಿ ಶ್ರೀನಿವಾಸ್ ರೆಡ್ಡಿ, ಪೋತಪ್ಪ, ಷಡಕ್ಷರಿ, ರವಿಬಾಬು, ರವಿಕುಮಾರ್, ರಂಗಸ್ವಾಮಿ ಸೇರಿ ಹಾಗೂ ಗುರುಚರಣ್ ಸಿಂಗ್ ಕೂಡ ಕೋರ್ಟ್‌ಗೆ ಹಾಜರಾಗಿದ್ದಾನೆ. ಇದನ್ನೂ ಓದಿ: ಕೋಗಿಲು ಉಳಿಸಿ, ಅಕ್ರಮ ವಲಸಿಗರನ್ನು ತೊಲಗಿಸಿ – ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಪ್ರತಿಯೊಬ್ಬ ಆರೋಪಿಯ ಹೆಸರು ಕರೆದ ನ್ಯಾಯಾಧೀಶರು ಎಲ್ಲಾ ಆರೋಪಿಗಳದ್ದು ಒಂದೇ ಅರೆಸ್ಟ್ ಮೆಮೋ ಇದೆಯಲ್ಲ ಯಾಕೆ ಅಂತ ಪ್ರಶ್ನಿಸಿದ್ರು. ಎಲ್ಲಾ ಆರೋಪಿಗಳ ತಂದೆ ಒಬ್ಬರೇನಾ? ಅಂತ ತನಿಖಾಧಿಕಾರಿ ವಿರುದ್ದ ಜಡ್ಜ್ ಗರಂ ಆದ್ರು. ಬಳಿಕ ಪೊಲೀಸರು ಕೊಲೆ ಆರೋಪಿ ಗುರುಚರಣ್ ಸಿಂಗ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರಿಗೆ ನ್ಯಾಯಾಧೀಶರು ಕ್ಲಾಸ್ ತೆಗೆದುಕೊಂಡರು. ಆರೋಪಿಗೆ ಅರೆಸ್ಟ್ ವಾರೆಂಟ್ ಬಗ್ಗೆ ತಿಳಿಸಬೇಕು ಅಲ್ವಾ.? ಬಳ್ಳಾರಿಯಿಂದ ಕರೆದುಕೊಂಡು ಬರೋದಲ್ಲಾ? ಸರಿಯಾಗಿ ಅರೆಸ್ಟ್ ಪ್ರಕ್ರಿಯೆ ಮಾಡೋಕೆ ಬರಲ್ವಾ ಅಂತ ತರಾಟೆಗೆ ತೆಗೆದುಕೊಂಡರು. ಸದ್ಯ ಎಲ್ಲಾ ಆರೋಪಿಗಳನ್ನು ಜ.19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಪರಪ್ಪನ ಆಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಲ್ವರು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ 2026ರ ಐಪಿಎಲ್ ಪ್ರಸಾರ ಬಂದ್ – RCB ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ!


