ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರುವ ಬಡ್ಡಿ ಮಗನ್ ಲೈಫು ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಾವುದೇ ಪ್ರಚಾರದ ಅಬ್ಬರವೂ ಇಲ್ಲದೇ ಒಂದೇ ಒಂದು ಹಾಡಿನ ಮೂಲಕವೇ ಈ ಚಿತ್ರ ಪ್ರದರ್ಶನ ಮಾಡಿರುವ ಪ್ರಚಾದ ವಿರಾಟ್ ರೂಪ ಪ್ರದರ್ಶಿಸಿರುವ ಈ ಸಿನಿಮಾದ ಖದರ್ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಇಂಥಾ ಮಹಾ ಮೋಡಿ ಸಾಧ್ಯವಾದದ್ದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬೊಂದು ಹಾಡಿನಿಂದ. ಈ ಹಾಡು ಪಡೆದುಕೊಂಡಿರೋ ವೀಕ್ಷಣೆ ಮತ್ತು ಅದರ ಸುತ್ತಾ ಹುಟ್ಟಿಕೊಂಡಿದ್ದ ಚರ್ಚೆ ಹಾಗೂ ಅದು ವೈರಲ್ ಆಗಿರುವ ರೀತಿಗಳೇ ನಿಜಕ್ಕೂ ಅಚ್ಚರಿ.
ಹೀಗೆ ಹಾಡುಗಳ ಮೂಲಕವೇ ಪ್ರಚಾರ ಪಡೆದುಕೊಂಡ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆದ ಅದೆಷ್ಟೋ ಉದಾಹರಣೆಗಳಿದ್ದಾವೆ. ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಈ ಚಿತ್ರವೂ ಕೂಡಾ ಅಂಥಾದ್ದೇ ಗೆಲುವು ಕಾಣಲಿರುವ ಶುಭ ಸೂಚನೆಗಳೇ ದಟ್ಟವಾಗಿ ಕಾಣಿಸುತ್ತಿವೆ. ಈ ಚಿತ್ರದಲ್ಲಿ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ವಿಭಿನ್ನ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಇದೆಲ್ಲದರ ಚಹರೆಗಳೂ ಕೂಡಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಸ್ಪಷ್ಟವಾಗಿ ಅನಾವರಣಗೊಂಡಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಈ ಪಾಟಿ ಕ್ಯೂರಿಯಾಸಿಟಿ ಹುಟ್ಟಿಕೊಂಡಿರುವುದಕ್ಕೂ ಇದೇ ಕಾರಣ.
ಈ ಟ್ರೇಲರ್ ಹರಿಕಥಾ ಸ್ವರೂಪದ ನಿರೂಪಣೆಯೊಂದಿಗೆ ಎಂಥವರನ್ನೂ ಸೆಳೆಯುವಂತೆ ಮೂಡಿ ಬಂದಿತ್ತು. ಇದನ್ನು ಈ ಶೈಲಿಯಲ್ಲಿ ನಿರೂಪಣೆ ಮಾಡಿರೋದಕ್ಕೂ ಕಥೆಗೂ ಕನೆಕ್ಷನ್ನುಗಳಿದ್ದಾವೆ. ಇದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾಲ್ಪನಿಕ ಹಳ್ಳಿಯೊಂದರಲ್ಲಿ ಘಟಿಸೋ ಕಥೆಯನ್ನೊಳಗೊಂಡಿರುವ ಚಿತ್ರ. ಇಂಥಾ ಹಳ್ಳಿಗಳಲ್ಲಿ ಅವರಿವರ ಮನೆ ಮ್ಯಾಟರುಗಳನ್ನು ಕೆದಕೋ ಕಸುಬಿನ ಹರಿಕಥೆ ಸದಾ ಚಾಲ್ತಿಯಲ್ಲಿರುತ್ತದೆ. ಇಂಥಾ ಮಜವಾದ ಹರಿಕಥಾ ಕಾಲಕ್ಷೇಪ ಈ ಸಿನಿಮಾದಲ್ಲಿದೆ. ಅದನ್ನು ನಿರ್ದೇಶಕರುಗಳು ಅತ್ಯಂತ ಮಜವಾದ ಸ್ವರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ. ಒಟ್ಟಾರೆಯಾಗಿ ಬಡ್ಡಿಮಗನ್ ಲೈಫು ಸೂಪರ್ ಆಗಿಯೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರೆಲ್ಲರಲ್ಲಿ ಮನೆ ಮಾಡಿಕೊಂಡಿದೆ.