ಬಕ್ರೀದ್ (Bakrid) ಎರಡು ಪ್ರಮುಖ ಇಸ್ಲಾಮಿಕ್ ಹಬ್ಬಗಳಲ್ಲಿ (Islamic Festival) ಒಂದಾಗಿದೆ. ಬಕ್ರೀದ್ ಹಬ್ಬದ ದಿನದಂದು ಯಾವ ಪ್ರಾಣಿಯನ್ನು ತ್ಯಾಗ ಮಾಡಿದರೂ, ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡುವುದು ಅವಶ್ಯಕ. ಒಂದು ಭಾಗವನ್ನು ಬಡವರಿಗೆ ವಿತರಿಸಬೇಕು. ಎರಡನೇ ಭಾಗವನ್ನು ಸಂಬಂಧಿಕರಿಗೆ ವಿತರಿಸಬೇಕು ಮತ್ತು ಮೂರನೇ ಭಾಗವನ್ನು ಮನೆಯವರು ಬಳಸಬೇಕು ಎನ್ನುವ ಸಂಪ್ರದಾಯವಿದೆ. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ಸ್ಮರಿಸುವ ದಿನವಾಗಿದೆ.
ಈ ವಿಶೇಷ ದಿನದಂದು ನಾವು ನಿಮಗೆ ಸ್ಪೆಷಲ್ ಮಟನ್ ಖೀಮಾ (Mutton Keema) ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಈ ರೆಸಿಪಿಯನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು:
ಮಟನ್ ಖೀಮಾ – 1/2 ಕೆ.ಜಿ
ಲಿವರ್ – 1/4 ಕೆ.ಜಿ
ಈರುಳ್ಳಿ – 3
ಬೆಳ್ಳುಳ್ಳಿ – 7ರಿಂದ 8 ಎಸಳು
ಶುಂಠಿ – 2 ಇಂಚಿನಷ್ಟು
ಹೆಚ್ಚಿದ ಹಸಿರುಮೆಣಸಿನ ಕಾಯಿ – 4
ಜೀರಿಗೆ – 1 ಚಮಚ
ಕರಿಮೆಣಸಿನ ಕಾಳು – 1 ಚಮಚ
ಚಕ್ಕೆ ಮತ್ತು ಲವಂಗ
ಅಚ್ಚಖಾರದ ಪುಡಿ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಹೆಚ್ಚಿದ ಟೊಮೆಟೊ – 1
ಮೊಸರು – 2 ಚಮಚ
ಕೊತ್ತಂಬರಿ ಸೊಪ್ಪು
ಎಣ್ಣೆ – 2 ಚಮಚ
ಪಲಾವ್ ಎಲೆ – 1
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಹಸಿ ಮಟನ್ ಖೀಮಾ, ಲಿವರ್, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಕುಕ್ಕರ್‌ಗೆ ಹಾಕಿ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ. ಬೆಂದ ಬಳಿಕ ಒಂದು ಪಾತ್ರೆಯಲ್ಲಿ ಹಾಕಿಡಬೇಕು.
* ಇದಾದ ಬಳಿಕ ಬೆಳ್ಳುಳ್ಳಿ, ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಶುಂಠಿಯನ್ನು ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.
* ನಂತರ ಒಂದು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಪಲಾವ್ ಎಲೆ, ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
* ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಖೀಮಾ ಮತ್ತು ಲಿವರ್ (ಬೇಯಿಸಿದ ಮಾಂಸ) ಹಾಕಿ 2-3 ನಿಮಿಷ ಚನ್ನಾಗಿ ಮಿಕ್ಸ್ ಮಾಡಿ. ನಂತರ ಹೆಚ್ಚಿದ ಹಸಿರುಮೆಣಸಿನ ಕಾಯಿ, ಸಾಂಬಾರ್ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಹೆಚ್ಚಿದ ಟೊಮೆಟೊ, ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ 2ರಿಂದ 3 ನಿಮಿಷ ಬೇಯಿಸಬೇಕು.
* ಕೊನೆಯಲ್ಲಿ 1 ಕಪ್ ನೀರು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿದ ಬಳಿಕ ಪಾತ್ರೆಯ ಬಾಯಿ ಮುಚ್ಚಿ 7ರಿಂದ 10 ನಿಮಿಷ ಬೇಯಿಸಿ.
*ಈಗ ನಿಮ್ಮ ಸ್ಪೆಷಲ್ ಮಟನ್ ಖೀಮಾ ಸವಿಯಲು ಸಿದ್ಧ.