ಚಿಕ್ಕಮಗಳೂರು/ಬೆಂಗಳೂರು: ದತ್ತ ಪೀಠಕ್ಕೆ ಶೀಘ್ರವೇ ಹಿಂದೂ ಅರ್ಚಕರನ್ನು ನೇಮಕ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಜರಂಗದಳದಿಂದ ಇಂದು ಮನವಿ ಸಲ್ಲಿಸಲಾಯಿತು.
ಚಿಕ್ಕಮಗಳೂರಿನ ದತ್ತ ಪೀಠವು ಹಿಂದಿನ ಹಲವು ದಶಕಗಳಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ದುರದೃಷ್ಟವಶಾತ್ ಅಲ್ಲಿ ಮುಸ್ಲಿಂ ಮೌಲ್ವಿಗಳು ಪೂಜೆ ಸಲ್ಲಿಸುತ್ತಿದ್ದು, ಪ್ರಸ್ತುತ ಹೈಕೋರ್ಟ್ ತೀರ್ಪಿನ ಪ್ರಕಾರ ಮೌಲ್ವಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜವು ಈ ಒಂದು ಅಪೇಕ್ಷೆಯನ್ನು ಮುಂದಿಟ್ಟುಕೊಂಡು ಹೋರಾಟವನ್ನು ನಡೆಸುತ್ತಾ ಬಂದಿದೆ.
ಹೈಕೋರ್ಟಿನ ಈ ತೀರ್ಪು ಹಿಂದೂ ಸಮಾಜದಲ್ಲಿ ಸಂತಸವನ್ನು ತಂದಿದೆ ಹಾಗೂ ಹಿಂದೂ ಸಮಾಜದ ನಂಬಿಕೆಗಳಿಗೆ ಬೆಲೆ ಸಿಕ್ಕಂತಾಗಿದೆ. ನ್ಯಾಯಾಲಯದ ಈ ತೀರ್ಪು ಹಿಂದೂ ಸಮಾಜದ ಗೆಲುವಾಗಿದೆ. ನ್ಯಾಯಾಲಯವು ನೀಡಿದ ತೀರ್ಪಿನಂತೆ ತಾವು ತಕ್ಷಣ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು. ಅಲ್ಲದೆ ಡಿಸೆಂಬರ್ 18 ರಂದು ದತ್ತ ಜಯಂತಿಯ ಪ್ರಯುಕ್ತ ನಡೆಯುವ 3 ದಿನದ ಕಾರ್ಯಕ್ರಮಕ್ಕೆ ಸಂಪೂರ್ಣ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ನಡೆಸಲು ಅನುವು ಮಾಡಿಕೊಡಬೇಕು. ತಾವು ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್ ಸುನಿಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಘು ಸಕಲೇಶಪುರ ಮತ್ತು ಮುರಳಿ ಕೃಷ್ಣ ಹಸಂತಡ್ಕ ಅವರುಗಳು ಜೊತೆಗಿದ್ದರು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು
ಕೋರ್ಟ್ ತೀರ್ಪು:
ವಿವಾದಿತ ಬಾಬಾಬುಡೆನ್‍ಗಿರಿಯ ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ನೇಮಕ ಮಾಡಿದ್ದ ಆದೇಶವನ್ನು ಕಳೆದ 7 ದಿನಗಳ ಹಿಂದೆ ಹೈಕೋರ್ಟ್ ರದ್ದು ಮಾಡಿದೆ. 2018ರ ಮಾರ್ಚ್ 19ರಂದು ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್‍ರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಿಸಿತ್ತು. ಇದನ್ನು ಪ್ರಶ್ನಿಸಿ ಸಂವರ್ಧನಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ನೇತೃತ್ವದ ನ್ಯಾಯಪೀಠ, ಮೌಲ್ವಿ ನೇಮಕಾತಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.