ChikkamagaluruDistrictsKarnatakaLatestMain Post

ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

ಚಿಕ್ಕಮಗಳೂರು: ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ಆವರಣದಲ್ಲಿ ಮಾಂಸಹಾರ ಸೇವನೆ ಮಾಡಿದ್ದು, ಹಿಂದೂ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ.

ದತ್ತಪೀಠದ ಉಮೇದುವಾರಿಕೆಗಾಗಿ ಎರಡು ಸಮುದಾಯಗಳು ದಶಕಗಳಿಂದ ಹೋರಾಟ ಮಾಡುತ್ತಿವೆ. ಹಾಗಾಗಿ ನ್ಯಾಯಾಲಯ ಕೂಡ ದತ್ತಪೀಠದ ಆವರಣದೊಳಗೆ ಕೆಲವೊಂದು ಆಚರಣೆಗೆ ನಿಬರ್ಂಧ ಹೇರಿದೆ. ಆದರೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ವಿವಾದಿತ ಜಾಗದಲ್ಲಿ ಪೂಜೆ ಮಾಡಿ ಮಾಂಸ ಸೇವನೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಇದನ್ನೂ ಓದಿ: ವಿವಾಹಿತೆಯ ಅನುಮಾನಾಸ್ಪದ ಸಾವು

ದತ್ತಪೀಠದಲ್ಲಿನ ಗೋರಿಗಳಿಗೆ ಪೂಜೆ ಮಾಡಲು ಹೇಗೆ ಅವಕಾಶ ಸಿಕ್ಕಿತು ಎಂದು ಬಜರಂಗದಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಿಂದೂಗಳ ಧಾರ್ಮಿಕ ಸಭೆ-ಸಮಾರಂಭದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಬಿರಿಯಾನಿ ಬೇಯಿಸಿ ತಿಂದಿರುವುದು ಇದೀಗ ಮತ್ತೊಂದು ವಿವಾದದ ಕಿಡಿಹೊತ್ತಿಸಿದೆ.

ಸರ್ಕಾರವೇ ನಿರ್ಮಿಸಿರುವ ಶೆಡ್: ನಿನ್ನೆ ದತ್ತಪೀಠದ ಗುಹೆಯ ಪಕ್ಕದಲ್ಲಿನ ತಾತ್ಕಾಲಿಕ ಶೆಡ್‍ನಲ್ಲಿ ಮುಸ್ಲಿಮರು ಮಾಂಸ ಬೇಯಿಸಿಕೊಂಡು ಸೇವನೆ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಕಾರರ ಪಿತ್ತ ನೆತ್ತಿಗೇರಿತ್ತು. ದತ್ತ ಜಯಂತಿ, ದತ್ತಮಾಲಾ ಅಭಿಯಾನದ ವೇಳೆ ಇಲ್ಲಿ ಹೋಮ-ಹವನ ನಡೆಸಲು ಸರ್ಕಾರವೇ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಇದು. ಈ ಶೆಡ್‍ನಲ್ಲಿ ಅನುಸೂಯ ಜಯಂತಿ, ದತ್ತಜಯಂತಿಯಂತೆ ಲೋಕ ಕಲ್ಯಾಣಾರ್ಥ ವಿವಿಧ ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುವುದು. ಆದರೆ ಅಂತಹ ಧಾರ್ಮಿಕ ಜಾಗದಲ್ಲೂ ಮಾಂಸ ಬೇಯಿಸಿದ್ದಾರೆ ಎಂದು ಹಿಂದೂ ಸಂಘಟಕರು ಮುಸ್ಲಿಮರ ವಿರುದ್ಧವೂ ಕಿಡಿಕಾರಿದ್ದಾರೆ.

ದತ್ತಪೀಠದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಬಜರಂಗದಳ ಕಾರ್ಯಕರ್ತರು ಮುಜರಾಯಿ ಇಲಾಖೆ ಮಾಂಸಹಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಹರಿಹಾಯ್ದರು. ಹೋಮದ ಜಾಗದಲ್ಲಿ ಮಾಂಸ ಬೇಯಿಸಿ ಅಪವಿತ್ರಗೊಳಿಸಿದ್ದಾರೆ. ದತ್ತಜಯಂತಿಯಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಎಂದು ಬಜರಂಗದಳ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ

ಅಲ್ಲಿ ಪೂಜೆ ಮಾಡಲ್ಲ, ಮತ್ತೆಲ್ಲಿ: ದತ್ತಜಯಂತಿಯಲ್ಲಿ ನಾವು ಲೋಕಕಲ್ಯಾಣಾರ್ಥ ಹೋಮ-ಹವನ ನಡೆಸುವ ಜಾಗವನ್ನು ಮುಸ್ಲಿಮರು ಅಪವಿತ್ರಗೊಳಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ಹೋಮ-ಹವನ, ಪೂಜೆ ಮಾಡುವುದಿಲ್ಲ. ಈ ಹಿಂದೆ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ನಡೆಯುತ್ತಿತ್ತು. ಇನ್ನು ಮುಂದೆ ಅದೇ ತುಳಸಿಕಟ್ಟೆ ಬಳಿ ಹೋಮ-ಹವನ ಮಾಡುತ್ತೇವೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ನಮಗೆ ಯಾವುದೇ ಪ್ರಶ್ನೆ ಮಾಡುವಂತಿಲ್ಲ. ತುಳಸಿಕಟ್ಟೆ ಬಳಿ ಹೋಮ ಮಾಡಲು ಸರ್ಕಾರ ವಿರೋಧ ತೋರಿದರೆ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿವಾದಿತ ಗೋರಿಗಳಿಗೆ ಪೂಜೆ: ದತ್ತಪೀಠದ ಗುಹೆಯೊಳಗಿನ ಗೋರಿಗಳಿಗೆ ಮುಜಾವರ್ ಮಾತ್ರ ಪೂಜೆ ಮಾಡಬೇಕು. ಬೇರೆ ಯಾರಿಗೂ ಪೂಜೆಗೆ ಅವಕಾಶವಿಲ್ಲ. ಆದರೆ ದರ್ಶನಕ್ಕೆ ಗುಹೆಯೊಳಗೆ ಹೋಗಿದ್ದ ಮುಸ್ಲಿಂ ಭಕ್ತರೇ ಪೂಜೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿಂದೂ ಸಂಘಟನೆಗಳ ಮುಖಂಡರು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

200 ಮೀಟರ್ ಸುತ್ತಳತೆಯಲ್ಲಿ ಮಾಂಸ ನಿಷೇಧ: 2010ರಲ್ಲಿ ಸುಪ್ರೀಂಕೋರ್ಟ್ ಕೂಡ 1999ರ ಪೂಜಾ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ. ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ ಮಾತ್ರ ದತ್ತಗುಹೆ-ಗೋರಿಗಳಿಗೆ ಪೂಜೆ ಸಲ್ಲಿಸಲು ಅವಕಾಶವಿದೆ. ಬೇರೆಯವರಿಗೆ ಪೂಜೆ-ಪುನಸ್ಕಾರಕ್ಕೆ ಅವಕಾಶವಿಲ್ಲ. ದತ್ತಜಯಂತಿ-ದತ್ತಮಾಲಾಧಾರಣೆ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ ಒತ್ತಾಯಿಸಿರುವ ಹಲವು ನಿದರ್ಶನಗಳಿವೆ. ಜೊತೆಗೆ ದತ್ತಪೀಠದ 200 ಮೀಟರ್ ಸುತ್ತಳತೆಯಲ್ಲಿ ಮುಜರಾಯಿ ಇಲಾಖೆಯ ನಿಯಮ-ನಿರ್ದೇಶನದಂತೆ ಯಾವುದೇ ರೀತಿಯ ಮಾಂಸಾಹಾರ ಮಾಡುವುದಕ್ಕೆ ಸಂಪೂರ್ಣ ನಿಷೇಧವಿದೆ. ಮಾಂಸಹಾರ ನಿಷೇಧ ಜಾರಿಯಲ್ಲಿದ್ದರೂ ಕೂಡ ಬಿರಿಯಾನಿ ಮಾಡಿ ತಿಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾಡಳಿತದಿಂದ ತಾತ್ಕಾಲಿಕ ಶೆಡ್ ಕ್ಲೀನ್: ಹೋಮ-ಹವನದ ಜಾಗದಲ್ಲಿ ಬಿರಿಯಾನಿ ತಿಂದ ವಿಷಯ ಹಾಗೂ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಗೊಂಡ ಜಿಲ್ಲಾಡಳಿತ ಮುಸ್ಲಿಮರು ಬಿರಿಯಾನಿ ತಿಂದಿದ್ದ ಹೋಮದ ಜಾಗವನ್ನು ಕ್ಲೀನ್ ಮಾಡಿದೆ. ತಾತ್ಕಾಲಿಕ ಶೆಡ್ ಹಾಗೂ ಅದರ ಸುತ್ತಲೂ ಬ್ಲೀಚಿಂಗ್ ಪೌಡರ್ ಹಾಕಿ ಕ್ಲೀನ್ ಮಾಡಿದ್ದು, ಈಗ ಅಲ್ಲಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಈ ಪ್ರಕರಣವನ್ನು ಖಂಡಿಸಿರುವ ವಿ.ಎಚ್.ಪಿ ಹಾಗೂ ಬಜರಂಗದಳ ಕಾರ್ಯಕರ್ತರು ದತ್ತಪೀಠದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸುಂದರ ಪ್ರಕೃತಿ ಹಾಳು, ಪೀಠದಲ್ಲಿ ಕೆಟ್ಟ ವಾಸನೆ: ಇದೆಲ್ಲದರ ಮಧ್ಯೆ ಸಮುದ್ರಮಟ್ಟದಿಂದ ಸುಮಾರು 2,500 ಅಡಿಗೂ ಎತ್ತರದಲ್ಲಿರುವ ಸುಂದರ ಹಾಗೂ ಸ್ವಚ್ಛ ವಾತಾವರಣದಲ್ಲಿ ಬೀರುತ್ತಿರುವ ವಾಸನೆಯನ್ನ ತಡೆಯಲಾಗದಂತಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಅಡುಗೆ ಮಾಡುತ್ತಿರುವುದು, ಬಹಿರ್ದೆಸೆಗೆ ಹೋಗುತ್ತಿರುವುದು, ತಿಂದ ಪ್ಲೇಟ್‍ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಇಲ್ಲಿನ ಸೌಂದರ್ಯ ಹಾಗೂ ಸ್ವಚ್ಛತೆಯನ್ನ ಹಾಳು ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಊಹಿಸಲಾಗದಷ್ಟು. ತಣ್ಣನೆಯ ಗಾಳಿ ಬೀಸುವ ದತ್ತಪೀಠದ ಆವರಣದಲ್ಲೇ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗುವಷ್ಟು ಹಾಳುಮಾಡಿದ್ದಾರೆ. ಕೂಡಲೇ ಜಿಲ್ಲಾಡಳಿತ ದತ್ತಪೀಠದ ಪರಿಸರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ದತ್ತಪೀಠದ ಸೌಂದರ್ಯ ಹಾಳುಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪ್ರವಾಸಿಗರೇ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published.

Back to top button