ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಹೈ ರಿಸ್ಕ್ ಕರ್ತವ್ಯದ ಮಧ್ಯೆಯೂ ಬೈಯಪ್ಪನಹಳ್ಳಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಬೈಯಪ್ಪನಹಳ್ಳಿ ಪೊಲೀಸರು ಕಸಾಯಿ ಖಾನೆ ಸೇರಬೇಕಿದ್ದ ಎಳೆ ಕರುವನ್ನು ಕಾಪಾಡಿ ಸಾಕುತ್ತಿದ್ದಾರೆ. ಕಿಡಿಗೇಡಿಗಳು ಮಾರ್ಚ್ 30ರ ರಾತ್ರಿ ಕಾರಲ್ಲಿ ಕರುವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಆಗ ಪೊಲೀಸರು ತಪಾಸಣೆ ಮಾಡುವಾಗ ಕರು ಸಿಕ್ಕಿದೆ. ನಂತರ ಕರುವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅಂದಿನಿಂದ ಪೊಲೀಸರು ಒಂದು ತಿಂಗಳ ಕರುವನ್ನು ಪೊಲೀಸ್ ಠಾಣೆಯಲ್ಲೇ ಸಾಕುತ್ತಿದ್ದಾರೆ.
Advertisement
Advertisement
ಈ ಕರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹೊಸ ಸದಸ್ಯನಾಗಿದ್ದು, ಕರುವಿಗೆ ಭೀಮ ಎಂದು ಹೆಸರಿಟ್ಟು ಮನೆಯ ಸದಸ್ಯನಂತೆ ಪ್ರೀತಿ, ಆದರ ತೋರಿಸುತ್ತಿದ್ದಾರೆ. ಬೈಯಪ್ಪನಹಳ್ಳಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಹಮದ್ ರಫೀಕ್ ತಂಡಕ್ಕೆ ಕರು ಸಿಕ್ಕಿತ್ತು.
Advertisement
ಈ ಬಗ್ಗೆ ಮಾತನಾಡಿದ ಇನ್ಸ್‌ಪೆಕ್ಟರ್ ಮಹಮದ್ ರಫೀಕ್, ಕಾರಿನಲ್ಲಿ ಆಗ ತಾನೆ ಹುಟ್ಟಿದ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದನು. ಕಾರನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು. ತಕ್ಷಣ ಕಾರು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕರು ಸಿಕ್ಕಿದೆ. ಅಂದಿನಿಂದ ನಮ್ಮಲ್ಲಿ ಒಬ್ಬ ಸದಸ್ಯನಂತೆ ನೋಡಿಕೊಳ್ಳುತ್ತಿದ್ದೇವೆ. ಪ್ರತಿದಿನ ಬೆಳಗ್ಗೆ 2 ಲೀಟರ್, ಸಂಜೆ 2 ಲೀಟರ್ ಹಾಲು ಕೊಡುತ್ತಿದ್ದೆವು. ಕರುವಿಗೆ ಅದು ಸಾಕಾಗಿಲ್ಲ ಅನ್ನಿಸಿತು. ಹೀಗಾಗಿ ಮೂರು ದಿನದಿಂದ ಬೆಲ್ಲದ ನೀರು, ಕಾಳು ನೆನೆಸಿ ಕೊಡುತ್ತಿದ್ದೇವೆ ಎಂದರು.
Advertisement
ನಮ್ಮ ಪೊಲೀಸ್ ಸಿಬ್ಬಂದಿ ಠಾಣೆಗೆ ಬಂದ ತಕ್ಷಣ ಕರುವನ್ನು ಮುದ್ದಾಡುತ್ತಾರೆ. ಎಲ್ಲರೂ ಬಾಟಲಿನಲ್ಲಿ ಹಾಲು ಕುಡಿಸುತ್ತಾರೆ. ನಾನು ಕೂಡ ಪ್ರತಿದಿನ ಭೀಮನ ಮುಖ ನೋಡಿಯೇ ಕೆಲಸಕ್ಕೆ ಹೋಗುವುದು. ನಾನು ಕೆಲಸಕ್ಕೆ ಹೋದರೆ ಹಿಂದೆ ಬರುತ್ತಾನೆ. ಎಲ್ಲರಿಗೂ ನಮ್ಮ ಮನೆಯ ಸದಸ್ಯನಂತೆ ಆಗಿದ್ದಾನೆ ಎಂದು ಸಂತಸದಿಂದ ಇನ್ಸ್‌ಪೆಕ್ಟರ್ ಹೇಳಿದರು.
ಬೈಯಪ್ಪನಹಳ್ಳಿ ಠಾಣೆ ಪೊಲೀಸರ ಪ್ರಾಣ ಪ್ರೀತಿಗೆ ಪೂರ್ವ ವಲಯದ ಡಿಸಿಪಿ ಡಾ.ಶರಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.