ಬೆಂಗಳೂರು: ಭಾಗಮತಿ ಎಕ್ಸ್‌ಪ್ರೆಸ್ (Bagmati Express) ರೈಲು ದುರಂತ (Train Accident) ನಡೆದ ಜಾಗದಲ್ಲಿ ಹಳಿಗಳ ತೆರವು ಕಾರ್ಯಚರಣೆ ಸತತ 18 ಘಂಟೆಗಳ ಬಳಿಕ ಯಶಸ್ವಿಯಾಗಿದೆ. ಹೊಸ ಟ್ರ್ಯಾಕ್ ನಿರ್ಮಾಣ ಮಾಡಿ, ಎಂದಿನಂತೆ ರೈಲು ಓಡಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಅಪಘಾತದ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಎಲ್ಲಾ ಬೋಗಿಗಳನ್ನ ಸಂಪೂರ್ಣವಾಗಿ ರೈಲ್ವೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಟ್ರಯಲ್ ರನ್ ಬಳಿಕ ಎಲ್ಲಾ ರೈಲುಗಳ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟದ ಮೈಸೂರು (Mysuru), ಬೆಂಗಳೂರು ಮೂಲಕವಾಗಿ ಬಿಹಾರದ ದರ್ಭಾಂಗ್‌ಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈನ ಕವರಪೆಟ್ಟೈ ಬಳಿ ಭೀಕರ ಅಪಘಾತಕ್ಕೊಳಗಾಗಿತ್ತು. ಲೂಪ್ ಲೈನ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಭಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು, 13 ಬೋಗಿಗಳು ಹಳಿ ತಪ್ಪಿದ್ದವು. ಇದೀಗ ಸತತ 18 ಘಂಟೆಗಳ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಕೇವಲ ಇಂಜಿನ್ ತೆರವು ಕಾರ್ಯಾಚರಣೆ ಮಾತ್ರ ಬಾಕಿ ಇದೆ. 120 ಟನ್ ತೂಕವಿರುವ ರೈಲಿನ ಇಂಜಿನ್ ತೆರವುಗೊಳಿಸಿ, ಟ್ರಯಲ್ ರನ್ ಮುಗಿಸಿದ ಬಳಿಕ ಎಲ್ಲಾ ರೈಲುಗಳ ಓಡಾಟಕ್ಕೆ ರೈಲ್ವೆ ಅಧಿಕಾರಿಗಳು ಅನುವು ಮಾಡಿಕೊಳ್ಳಲಿದ್ದಾರೆ.
ಹೊಸದಾಗಿ ಟ್ರ್ಯಾಕ್ ಅಳವಡಿಸಿದ್ದು, ಸಂಪೂರ್ಣ ತೆರವು ಕಾರ್ಯಾಚರಣೆಯ ಬಳಿಕ ಎಂದಿನಂತೆ ರೈಲು ಸಂಚಾರ ಆರಂಭವಾಗಲಿದೆ. ಇನ್ನೂ 19 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೆನ್ನೈ ನಗರದ ಸ್ಟ್ಯಾನ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಕವರಪೆಟ್ಟೈ ಲೂಪ್ ಲೈನ್ ನಲ್ಲಿ ಕಳೆದ ಒಂದು ವಾರದಿಂದ ಗೂಡ್ಸ್ ರೈಲು ನಿಂತಿತ್ತು. ಭಾಗಮತಿ ಎಕ್ಸ್‌ಪ್ರೆಸ್ ಮುಖ್ಯ ಮಾರ್ಗದಲ್ಲಿ ಗುಡೂರು ಕಡೆಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ಅದು ತಪ್ಪಾಗಿ ಕವರಪೆಟ್ಟೈ ನಿಲ್ದಾಣದ ಲೂಪ್ ಲೈನ್ ಗೆ ಪ್ರವೇಶಿಸಿದೆ. ಇದೇ ಲೈನ್ ನಲ್ಲಿ ಗೂಡ್ಸ್ ರೈಲು ನಿಂತಿತ್ತು. ಈ ವೇಳೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ರೈಲ್ವೆ ಪಾಯಿಂಟ್ ತಪ್ಪಾಗಿ ಈ ಘಟನೆ ನಡೆದಿರೋದು ಮೇಲ್ನೋಟಕ್ಕೆ ತಿಳಿದಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ಎನ್‍ಐಎ ಯಿಂದ ತನಿಖೆ ನಡೆಯುತ್ತಿದೆ.