ಬಾಗಲಕೋಟೆ: ಸನಾದಿ ಅಪ್ಪಣ್ಣ (Sanaadi Appanna) ವಂಶಸ್ಥರಿಗೆ ಬಾಗಲಕೋಟೆ (Bagalkote) ಜಿಲ್ಲಾಡಳಿತದಿಂದ ಅಪಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಫೆಬ್ರವರಿ 22 ರಿಂದ 25ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ರನ್ನ ಉತ್ಸವ (Ranna Uthsava) ಕಾರ್ಯಕ್ರಮ ಮಾಡಲಾಗಿತ್ತು. ಆದರೆ ಕೋಟ್ಯಂತರ ರೂ. ಖರ್ಚು ಮಾಡಿದ ರನ್ನ ವೈಭವದಲ್ಲಿ ಸನಾದಿ ಅಪ್ಪಣ್ಣ ವಂಶಸ್ಥರಾದ ನಮಗೆ, ಕಲೆ ಪ್ರಸ್ತುತ ಪಡಿಸಲು ಸರಿಯಾದ ವೇದಿಕೆಯನ್ನೂ ಕಲ್ಪಿಸಲಿಲ್ಲ. ಕೇವಲ 5 ಸಾವಿರ ರೂ. ಸಂಭಾವನೆ ನೀಡಿ ಜಿಲ್ಲಾಡಳಿತ ನಮಗೆ ಅಪಮಾನವೆಸಗಿದೆ ಎಂದು ಅಪ್ಪಣ್ಣ ಅವರ ವಂಶಸ್ಥರಾದ ಬಸವಂತ್ ಭಜಂತ್ರಿ ಆರೋಪ ಮಾಡಿದ್ದಾರೆ.
Advertisement
4.5 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಡೆದ ರನ್ನ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರನ್ನ ವೈಭವದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ, ಸಿನಿಮಾ, ಹಾಡುಗಳ ಝಲಕ್, ಚಿತ್ರನಟಿ ರಕ್ಷಿತಾ, ಗಾಯಕ ವಿಜಯ್ ಪ್ರಕಾಶ್,ಸಂಗೀತ ನಿರ್ದೇಶಕ ಗಾಯಕ ಗುರುಕಿರಣ್, ರಾಜೇಶ್ ಕೃಷ್ಣನ್ ತಂಡದಿಂದ ಭರ್ಜರಿ ಹಾಡು ನೃತ್ಯ ನಡೆದಿತ್ತು.
Advertisement
Advertisement
ವೈಭವದಲ್ಲಿ ಮುಖ್ಯ ವೇದಿಕೆಯಲ್ಲಿ ಶಹನಾಯಿ ವಾದನಕ್ಕೆ ಅವಕಾಶ ಕೊಟ್ಟಿರಲಿಲ್ಲ. ಬದಲಾಗಿ ಅಂಬೇಡ್ಕರ್ ಭವನದಲ್ಲಿ ನಡೆದ ಕಿರು ವೇದಿಕೆಯಲ್ಲಿ ನಮಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಸರಿಯಾದ ಮೈಕ್ ವ್ಯವಸ್ಥೆ ಕೂಡ ಇಲ್ಲ ಎಂದು ಬಸವಂತ್ ಭಜಂತ್ರಿ ಕಿಡಿಕಾರಿದ್ದಾರೆ.
Advertisement
ಜಿಲ್ಲಾಡಳಿತ ನೀಡಿದ ಕೀಳು ಮಟ್ಟದ ಗೌರವಕ್ಕೆ ಅಪ್ಪಣ್ಣ ವಂಶಸ್ಥರು ಆಕ್ರೋಶ ವ್ಯಕ್ತಪಡಿಸಿ ಚೆಕ್ ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್ ನೀಡಿದ್ದಾರೆ. 300 ವರ್ಷದ ಶಹನಾಯಿ ಇತಿಹಾಸ ನಮ್ಮ ಕುಟುಂಬಕ್ಕಿದೆ. ಆದರೆ ಇಲ್ಲಿ ನಮಗೆ ಅಪಮಾನ ಮಾಡಿದರು. ನಮಗಷ್ಟೇ ಅಲ್ಲ ಸ್ಥಳೀಯ ಕಲಾವಿದರಿಗೆ ಸರಿಯಾಗಿ ಮಾನ್ಯತೆ ನೀಡಲಿಲ್ಲ ಎಂದು ಅಪ್ಪಣ್ಣ ವಂಶಸ್ಥರು ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.