– ಸಚಿವ ತಿಮ್ಮಾಪೂರ್ ವಿರುದ್ಧ ವಿದ್ಯಾರ್ಥಿನಿ ಬಹಿರಂಗ ಅಸಮಾಧಾನ
– ಅನರ್ಹರಿಗೆ ಬಿಸಿಎಂ ಹಾಸ್ಟೆಲ್ ಸೀಟ್ ಸಿಕ್ಕಿದ್ದು ಹೇಗೆ?
– ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು
ಬಾಗಲಕೋಟೆ: ಉತ್ತಮ ಅಂಕ ಪಡೆದರೂ ಬಿಸಿಎಂ ಹಾಸ್ಟೆಲ್ (BCM Hostel) ಸಿಗದ್ದಕ್ಕೆ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಸಚಿವರ ಸ್ವಕ್ಷೇತ್ರ ಮುಧೋಳ (Mudhol) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.
ಪೆಟ್ಲೂರ ಗ್ರಾಮದ ಬಡ ಕುಟುಂಬದ ಐಶ್ವರ್ಯ ಪಾಯಗೊಂಡ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 88% ಅಂಕ ಪಡೆದಿದ್ದಳು. ನಂತರ ಪ್ರಥಮ ಪಿಯು ವಿಜ್ಞಾನ ವಿಭಾಗಕ್ಕೆ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು.
ಮನೆಯಿಂದ ಕಾಲೇಜಿಗೆ ಹೋಗಲು ದೂರ ಇರುವ ಕಾರಣ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಅಧಿಕಾರಿಗಳು ಆಕೆಗೆ ಪ್ರವೇಶ ನೀಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ ಪೆಟ್ಟೂರ್‌ನಿಂದ ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ಹೋಗುತ್ತಿದ್ದಳು.
ಕೆಲ ದಿನಗಳ ಹಿಂದೆ ಮುಧೋಳ ತಾಲೂಕಿನ ಹೆಬ್ಬಾಳದ ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆಯಲ್ಲಿ ಐಶ್ವರ್ಯಾಗೆ ಸನ್ಮಾನವನ್ನು ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸುವ ಮೊದಲು ತನ್ನ ಸಾಧನೆಯ ಬಗ್ಗೆ ಮಾತನಾಡಲು ಐಶ್ವರ್ಯಾ ವೇದಿಕೆಗೆ ಆಗಮಿಸಿದ್ದಾಳೆ. ವೇದಿಕೆ ಆಗಮಿಸಿದ ಆಕೆ ಹಾಸ್ಟೆಲ್ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸಿಟ್ಟು ಹೊರ ಹಾಕಿದ್ದಾಳೆ. ಈಕೆಯ ಭಾಷಣದ ವಿಡಿಯೋ ಈಗ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ
ವಿದ್ಯಾರ್ಥಿನಿ ಹೇಳಿದ್ದೇನು?
ನಾನು ಅತ್ಯಂತ ಬಡಕುಟುಂಬದ ಮಗಳು, ಅಂತಹ ಬಡ ಕುಟುಂಬದಲ್ಲಿ ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ ನನಗೆ ಹಾಸ್ಟೆಲ್ ಸೀಟ್ ಸಿಗಲಿಲ್ಲ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ.
ಹಾಸ್ಟೆಲ್ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ ತಿಮ್ಮಾಪುರ ಸಾಹೇಬ್ರು ಹೇಳಿದ್ರೆ ಮಾತ್ರ ಆಯ್ಕೆ ಮಾಡುತ್ತೇವೆ. ತಿಮ್ಮಾಪುರ ಸಾಹೇಬರ ಆಫೀಸಿಗೆ ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲ. 50- 55% ಅಂಕ ಪಡೆದವರಿಗೆ ಹಾಸ್ಟೆಲ್ ಸಿಕ್ಕಿದೆ. ಆದರೆ 90-95% ಅಂಕ ಪಡೆದವರು ಬಸ್ಸಿನಲ್ಲಿ ಹೋಗುತ್ತಿದ್ದೇವೆ.
ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು ಎಂದು ಸನ್ಮಾನ ತಿರಸ್ಕರಿಸಿದ್ದಾಳೆ.