ಬಾಗಲಕೋಟೆ: ಈ ಕಬ್ಬು ಬೆಳೆಗಾರರ ಸಮಸ್ಯೆ ಸದ್ಯಕ್ಕೆ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ರತಿ ವರ್ಷ ಬೆಳೆಗಾರರು ಬಾಕಿ ಪಾವತಿಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಪದೇ ಪದೇ ಕಾರ್ಖಾನೆ ಮಾಲೀಕರು ಬಾಕಿ ಹಣ ಇವತ್ತು ಕೊಡ್ತೀವಿ, ನಾಳೆ ಕೊಡ್ತಿವಿ ಎಂದು ಕಾಗೆ ಹಾರಿಸೋದನ್ನೇ ಮುಂದುವರಿಸುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿಗಳು ಕಬ್ಬಿನ ಬಾಕಿ ವಿಚಾರವಾಗಿ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದರು. 15 ದಿನದೊಳಗೆ ಕಬ್ಬಿನ ಬಾಕಿ ಪಾವತಿಸಬೇಕು, ಇಲ್ಲದಿದ್ದರೆ ಕಾರ್ಖಾನೆ ಮುಟ್ಟುಗೋಲು ಹಾಕಿಕೊಂಡು ಸಕ್ಕರೆ ಮಾರಾಟ ಮಾಡಿ ಬಿಲ್ ಪಾವತಿಸುವ ಎಚ್ಚರಿಕೆ ನೀಡಿದ್ದರು.
Advertisement
Advertisement
ಮುಖ್ಯಮಂತ್ರಿಗಳ ಈ ಆದೇಶಕ್ಕೆ ಕಿಮ್ಮತ್ತೇ ಇಲ್ಲದಂತಾಗಿದೆ. ಇದೊಂದು ರೈತರ ಕಣ್ಣೊರೆಸುವ ತಂತ್ರವಷ್ಟೇ. ಮುಖ್ಯಮಂತ್ರಿಗಳ ಈ ಆದೇಶವನ್ನು ಕಾರ್ಖಾನೆ ಮಾಲೀಕರು ಪಾಲಿಸಿಲ್ಲ. ಇದು ಕಾಟಾಚಾರದ ಆದೇಶವಾಗಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ. ಹಾಗಾಗಿ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ನಮಗೆ ಬಾಕಿ ಕೊಡಿಸುವ ಕಾರ್ಯವಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ರೈತರು ಮತ್ತೆ ಎಚ್ಚರಿಸಿದ್ದಾರೆ.
Advertisement
Advertisement
ಬಾಗಲಕೋಟೆ ಜಿಲ್ಲೆಯೊಂದರಲ್ಲೇ 2017-18ನೇ ಸಾಲಿನಲ್ಲಿ 160 ಕೋಟಿ, 2018-19ನೇ ಸಾಲಿನಲ್ಲಿ 280 ಕೋಟಿ ಕಬ್ಬಿನ ಬಾಕಿ ಹಣ ಪಾವತಿಸಬೇಕಿದೆ. ಹೀಗಾಗಿ 15 ದಿನದಲ್ಲಿ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಸಕ್ಕರೆ ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕಾರ ಇನ್ನೆರಡು ದಿನದಲ್ಲಿ ಬಾಕಿ ಉಳಿಸಿಕೊಂಡ ಎಂಟು ಕಾರ್ಖಾನೆಗಳಿಗೆ ನೊಟೀಸ್ ನೀಡಲು ಮುಂದಾಗಿರುವುದಾಗಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.