ಬಾಗಲಕೋಟೆ: ಭೂಮಿ ಮೇಲಿನ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗುವ ಸುಳಿವು ಐದಾರು ತಿಂಗಳ ಹಿಂದೆಯೇ ಸಿಕ್ಕಿತ್ತಾ ಎಂಬ ಪ್ರಶ್ನೆ ಮೂಡಿದ್ದು, ಕ್ರಿಯಾಸಮಾಧಿಗೆ ಬಳಸಲಾಗಿರುವ ವಿಭೂತಿಗಟ್ಟಿ ತಯಾರಿಸಲು ಶ್ರೀಗಳು ಸೂಚನೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.
ಸಿದ್ದಗಂಗಾ ಶ್ರೀಗಳನ್ನು 6 ತಿಂಗಳ ಹಿಂದೆ ಭೇಟಿಯಾದ ವಿಭೂತಿ ತಯಾರಿಸುವ ಕುಟುಂಬ, ಅಂದು ಶ್ರೀಗಳು ಆಡಿರುವ ಮಾತನ್ನು ಸ್ಮರಿಸಿದೆ. ಸಿದ್ದಗಂಗಾ ಶ್ರೀಗಳು ಆರು ತಿಂಗಳ ಮುಂಚೆಯೇ ಎರಡು ಸಾವಿರ ಕ್ರಿಯಾಗಟ್ಟಿ ಮತ್ತು ಎಂಟು ಸಾವಿರ ವಿಭೂತಿಯನ್ನು ನೀಡಲು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
Advertisement
Advertisement
ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ತಯಾರು ಮಾಡಿದ ವಿಭೂತಿಗಳನ್ನು ಶ್ರೀಗಳ ಕ್ರಿಯಾಸಮಾಧಿಗೆ ಬಳಸಲಾಗಿದೆ. ಶುದ್ಧ ದೇಶಿ ತಳಿಯ ಆಕಳ ಸಗಣಿಯಿಂದ ಓಂ ನಮಃ ಶಿವಾಯ ಮಂತ್ರ ಪಠಣದೊಂದಿಗೆ ಇವರು ವಿಭೂತಿ ತಯಾರು ಮಾಡುತ್ತಾರೆ. ಈ ಕುಟುಂಬ ಆರು ತಿಂಗಳ ಹಿಂದೆ ತುಮಕೂರಿನಲ್ಲಿ ಶ್ರೀಗಳನ್ನು ಭೇಟಿಯಾಗಿತ್ತು. ಆಗ ಶ್ರೀಗಳು ವಿಭೂತಿ ನೀಡಲು ತಿಳಿಸಿದ್ದರು.
Advertisement
ವೀರಯ್ಯ ಹಿರೇಮಠ ಕುಟುಂಬ ಕಳೆದ 60 ವರ್ಷಗಳಿಂದ ಸಾಂಪ್ರದಾಯಿಕ ವೃತ್ತಿಯನ್ನಾಗಿ ವಿಭೂತಿ ತಯಾರಿಕೆ ಕಾರ್ಯ ಮಾಡುತ್ತಿದೆ. ಇವರು ತಯಾರಿಸುವ ವಿಭೂತಿ ಪವಿತ್ರವಾದದ್ದು ಹಾಗು ಅಷ್ಟೇ ಮಹತ್ವದ್ದು ಎಂದು ಕರೆಯಲಾಗುತ್ತದೆ. ಯಾವುದೇ ಕಲಬೆರಕೆ ಮಾಡದೇ ಪರಿಶುದ್ಧವಾದ ವಿಭೂತಿ ತಯಾರಿಸುವುದು ಇಲ್ಲಿನ ವಿಶೇಷತೆ.
Advertisement
ದೇಶಿ ತಳಿಯ ಆಕಳುಗಳ ಸಗಣಿ ಬಳಸಿಕೊಂಡು ಅದನ್ನು ಬೂದಿ ಮಾಡಿ ನಂತರ ಅದನ್ನು ಸಾಣಿಗೆಯಲ್ಲಿ ಸೋಸಿ ಬಳಿಕ ಕ್ರಿಯಾಗಟ್ಟಿ ಮತ್ತು ವಿಭೂತಿಯನ್ನಾಗಿ ಮಾಡುತ್ತಾರೆ. ಈ ಕುಟುಂಬ ತಯಾರಿಸಿದ ವಿಭೂತಿಗಳನ್ನು ಯಾವುದೇ ಜಾತ್ರೆ, ಸಂತೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಾಗಿ ವಿಭೂತಿಗಳನ್ನು ಕೇವಲ ಮಠಗಳಿಗೆ ಮಾತ್ರ ನೀಡುವುದು ಮತ್ತೊಂದು ವಿಶೇಷವಾಗಿದೆ. ದೇಶದ ವಿವಿಧ ಪ್ರಮುಖ ಮಠಗಳಿಗೆ ಇವರ ವಿಭೂತಿಗಳು ರವಾನೆಯಾಗುತ್ತವೆ. ಕಂಚಿ, ಕಾಶಿ, ಸಿದ್ದರಾಮೇಶ್ವರ, ಮಠ ಹುಬ್ಬಳ್ಳಿ ಮೂರು ಸಾವಿರ ಮಠ ಸೇರಿದಂತೆ ಪ್ರಮುಖ ಮಠಗಳಿಗೆ ಇವರೇ ವಿಭೂತಿಗಳನ್ನು ಪೂರೈಸುತ್ತಾರೆ.
ಈ ಕುಟುಂಬದ ಸದಸ್ಯರೇ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಭೂತಿಗಳನ್ನು ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು ನೋವು ತಂದಿದೆ. ಅವರ ಕ್ರಿಯಾಸಮಾಧಿಗೆ ನಮ್ಮ ವಿಭೂತಿ ಬಳಸಿಕೊಂಡಿದ್ದು ನಮ್ಮ ಜೀವನ ಪಾವನವಾಯಿತು. ಇದು ನಮಗೆ ಶ್ರೀಗಳ ಆಶೀರ್ವಾದ ಎಂದು ವಿಭೂತಿ ತಯಾರಿಸಿದ ಕುಟುಂಬ ತಿಳಿಸಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಸವಣ್ಣನ ನೆಲದ ವಿಭೂತಿ ಬಳಸಿದ್ದು ವಿಶೇಷವಾಗಿದ್ದು, ಇದಕ್ಕಾಗಿ ಆರು ತಿಂಗಳ ಮುಂಚೆಯೇ ವಿಭೂತಿ ನೀಡಲು ಹೇಳಿದ್ದ ಶ್ರೀಗಳು ಹೇಳಿರುವುದು ಅಚ್ಚರಿ ತಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv