ಬಾಗಲಕೋಟೆ: ದೇಶ ಸೇವೆಯ ಕನಸು ಹೊತ್ತು ಭಾರತೀಯ ಸೇನೆಗೆ (Indian Army) ಸೇರಿದ್ದರು. ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧನಿಗೆ ಜಮ್ಮು ಕಾಶ್ಮೀರಕ್ಕೆ (Jammu Kashmir) ವರ್ಗಾವಣೆ ಆಗಿತ್ತು. ವರ್ಗಾವಣೆ ಬಳಿಕ ಜೊತೆಗೆ ಇದ್ದ ಪತ್ನಿಯನ್ನು ಊರಿಗೆ ಕಳಿಸಿ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಪತ್ನಿ ಬೆಳಿಗ್ಗೆಯಷ್ಟೇ ಮನೆಗೆ ಬಂದು ಸೇರಿದರೆ ಸಂಜೆ ವೇಳೆಗೆ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಅಪಘಾತದಲ್ಲಿ ಬೆಳಗಾವಿ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್, ಮುಧೋಳದ ಮಹಾಲಿಂಗಪುರದ ಮಹೇಶ್ ಮರಿಗೊಂಡ, ಕುಂದಾಪುರ ಬೀಜಾಡಿಯ ಅನುಪ್ ಮೃತರಾಗಿದ್ದಾರೆ. ಇದನ್ನೂ ಓದಿ: ಪೂಂಚ್‌ನಲ್ಲಿ 300 ಅಡಿ ಕಂದಕಕ್ಕೆ ಉರುಳಿದ ಸೇನಾ ವಾಹನ : ಕರ್ನಾಟಕದ ಮೂವರು ಸೈನಿಕರು ಹುತಾತ್ಮ
Advertisement
Advertisement
ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ 25 ವರ್ಷದ ಮಹೇಶ್ ನಾಗಪ್ಪ ಮರಿಗೊಂಡ (Mahesh Nagappa) 11ನೇ ಮರಾಠಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇನೆಗೆ ಸೇರಿ 6 ವರ್ಷ 6 ತಿಂಗಳು ಆಗಿತ್ತು. ಮಹೇಶ್ ಅವರು ಮೂರು ವರ್ಷದ ಹಿಂದೆ ಲಕ್ಷ್ಮೀ ಅವರ ಕೈ ಹಿಡಿದಿದ್ದರು. ಮಂಗಳವಾರ ಬೆಳಗ್ಗೆ ಲಕ್ಷ್ಮೀ ಅವರು ಮಹಾಲಿಂಗಪುರಕ್ಕೆ ಬಂದಿದ್ದಾರೆ. ಆ ಬಳಿಕ ಪೋನ್‌ನಲ್ಲಿ ಮಹೇಶ್ ಜೊತೆ ಮಾತನಾಡಿದ್ದಾರೆ. ಆದರೆ ಸಂಜೆ ವಾಹನದೊಂದಿಗೆ ಪ್ರಪಾತಕ್ಕೆ ಬಿದ್ದು ಯೋಧ ಮಹೇಶ್ ಹುತಾತ್ಮರಾಗಿದ್ದಾರೆ.
Advertisement
ಮಹೇಶ್ ಹಿರಿಯ ಪುತ್ರನಾಗಿದ್ದು ಕುಟುಂಬವೇ ಅವರ ಮೇಲೆ ಅವಲಂಬಿಸಿತ್ತು. ಇದೀಗ ಮಗನನ್ನು ಕಳೆದುಕೊಂಡು ತಾಯಿ, ಅಜ್ಜಿ ಸೇರಿದಂತೆ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಬಂಧುಗಳು ಮನೆ ಬಳಿ ಜಮಾವಣೆಗೊಂಡಿದ್ದಾರೆ.
Advertisement
ಶಾಸಕ ಸಿದ್ದು ಸವದಿ, ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಜೆ ಮಹಾಲಿಂಗಪುರದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಸಾಂತ್ವನ ಹೇಳಿದ ಸಚಿವ ತಿಮ್ಮಾಪುರ ಕುಟುಂಬಕ್ಕೆ ಸರಕಾರದಿಂದ ಸೇರಬೇಕಾದ ಎಲ್ಲ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಮನೆಗೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರುಡುತ್ತಿದ್ದು. ಇಂದು ಪಾರ್ಥಿವ ಶರೀರ ಸ್ವಗ್ರಾಮ ತಲುಪಿದ್ದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.